ಬಿಜೆಪಿಯನ್ನು ‘ಭಾರತೀಯ ಜಿನ್ನಾ ಪಾರ್ಟಿ’ ಎನ್ನಬೇಕು: ಸಾಮಾಜಿಕ ಹೋರಾಟಗಾರ ಹರ್ಷ ಮಂದರ್

Update: 2019-12-23 14:10 GMT

ಬೆಂಗಳೂರು, ಡಿ.23: ಮುಹಮ್ಮದ್ ಅಲಿ ಜಿನ್ನಾ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟಿರುವ ಬಿಜೆಪಿ ಅನ್ನು ‘ಭಾರತೀಯ ಜಿನ್ನಾ ಪಾರ್ಟಿ’ ಎಂದು ಹೆಸರಿಟ್ಟು ಕೂಗಬೇಕಾಗಿದೆ ಎಂದು ಖ್ಯಾತ ಸಾಮಾಜಿಕ ಹೋರಾಟಗಾರ ಹಾಗೂ ಮಾಜಿ ಸರಕಾರಿ ಅಧಿಕಾರಿ ಹರ್ಷ ಮಂದರ್ ಹೇಳಿದರು.

ಸೋಮವಾರ ನಗರದ ಮಿಲ್ಲರ್ಸ್ ರಸ್ತೆಯ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಅಖಿಲ ಕರ್ನಾಟಕ ಮುಸ್ಲಿಂ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ಆಯೋಜಿಸಿದ್ದ, 'ನಾವು ಭಾರತದ ಜನರು ಸಿಎಎ ಮತ್ತು ಎನ್‌ಆರ್‌ಸಿ ಅನ್ನು ತಿರಸ್ಕರಿಸಿ' ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಮುಸ್ಲಿಮರು ಅಖಂಡ ಹಿಂದೂಸ್ತಾನದಲ್ಲಿಯೇ ಉಳಿಯಬೇಕೆಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಬಯಸಿದ್ದರು. ಅಷ್ಟೇ ಅಲ್ಲದೆ, ಇದಕ್ಕಾಗಿಯೇ ತಮ್ಮ ಪ್ರಾಣ ತ್ಯಾಗ ಮಾಡಿದರು. ಆದರೆ, ಮುಹಮ್ಮದ್ ಅಲಿ ಜಿನ್ನಾ ಎರಡು ದೇಶಗಳ ಬಗ್ಗೆ ಆಸೆ ಹೊಂದಿದ್ದ. ಇದೀಗ ಬಿಜೆಪಿಯೂ ಜಿನ್ನಾ ರೀತಿಯೇ ವರ್ತನೆ ಮಾಡುತ್ತಿದ್ದು, ಮುಸ್ಲಿಮರು ದೇಶ ಬಿಟ್ಟು ಹೋಗಲಿ ಎನ್ನುವ ಮನಸ್ಥಿತಿ ಹೊಂದಿದ್ದಾರೆ. ಹಾಗಾಗಿ, ಅವರ ಪಕ್ಷಕ್ಕೆ ‘ಭಾರತೀಯ ಜಿನ್ನಾ ಪಾರ್ಟಿ’ ಎನ್ನಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇತ್ತೀಚಿಗೆ ಸಾರ್ವಜನಿಕರನ್ನು ಉದ್ದೇಶಿಸಿದ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎನ್‌ಆರ್‌ಸಿ, ಸಿಎಎ ಕುರಿತು ಯಾರು ಆತಂಕಗೊಳ್ಳಬೇಡಿ. ಕೆಲ ನಗರ ನಕ್ಸಲರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ. ಆದರೆ, ಮೋದಿ ಅವರು ಹಸಿ ಸುಳ್ಳುಗಳನ್ನಾಡಿದ್ದಾರೆ. ಇನ್ನು ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಲವು ಭಾರೀ ಈ ಎರಡು ಕಾಯ್ದೆಗಳನ್ನು ಜಾರಿಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.

ತಿರಸ್ಕರಿಸಿ: ಸಿಎಎ ಒಂದು ಕಠಿಣ ಕಾಯ್ದೆ ಆಗಿದ್ದು, ಒಂದು ವೇಳೆ ಜಾರಿಯಾದರೆ ಎಲ್ಲರೂ ಸರದಿ ಸಾಲಿನಲ್ಲಿ ನಿಂತು ತಮ್ಮ ಪೌರತ್ವ ಸಾಬೀತುಪಡಿಸಲು ಕಾಗದ ನೀಡಬೇಕಾಗಿದೆ ಎಂದ ಅವರು, ಒಂದು ವೇಳೆ ಎನ್‌ಆರ್‌ಸಿ, ಸಿಎಎ ನೋಂದಣಿ ಪ್ರಕ್ರಿಯೆ ಆರಂಭವಾದರೆ, ನಾವು ಇದನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಬೇಕು ಎಂದು ಹೇಳಿದರು.

ವಿಭಜನೆಗೊಂಡಾಗ ನಮ್ಮ ಪೂರ್ವಜರು, ಧರ್ಮಾಧಾರಿತ ಪಾಕಿಸ್ತಾನಕ್ಕೆ ಹೋಗುವುದು ಅಥವಾ ಜಾತ್ಯತೀತ ದೇಶವಾಗಿರುವ ಭಾರತದಲ್ಲಿ ಉಳಿಯುವುದು ಎಂಬ ಆಯ್ಕೆಯಲ್ಲಿ ಭಾರತವನ್ನೇ ಆಯ್ಕೆ ಮಾಡಿಕೊಂಡರು. ಆದರೆ, ಇಂದು ನಮ್ಮ ಮುಂದೆ ಭಾರತ ಮಾತ್ರ ಆಯ್ಕೆ ಇರುವುದು. ಇದನ್ನು ಯಾವುದೇ ಕಾರಣಕ್ಕೂ ಛಿದ್ರ ಮಾಡಲು ಅವಕಾಶ ನೀಡುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News