×
Ad

ಮಂಗಳೂರು ಗೋಲಿಬಾರ್: ‘ಸುಪ್ರೀಂ’ ನ್ಯಾಯಮೂರ್ತಿಯಿಂದ ತನಿಖೆಗೆ ವಿ.ಎಸ್.ಉಗ್ರಪ್ಪ ಆಗ್ರಹ

Update: 2019-12-23 21:55 IST

ಬೆಂಗಳೂರು, ಡಿ.23: ಎನ್‌ಆರ್‌ಸಿ ಹಾಗೂ ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಗೋಲಿಬಾರ್‌ಗೆ ಇಬ್ಬರು ಬಲಿಯಾಗಿರುವ ಪ್ರಕರಣದ ಕುರಿತು ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಸೋಮವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಬೇರೆ ಯಾವುದೇ ಬಗೆಯ ತನಿಖೆ ನಡೆಸಿದರೂ ಸತ್ಯ ಹೊರಗೆ ಬರಲು ಸಾಧ್ಯವಿಲ್ಲ. ಆದುದರಿಂದ, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಿಂದಲೇ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರದಿಂದ ಇಂದು ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಆಡಳಿತದಲ್ಲಿರುವವರು ದಾರಿ ತಪ್ಪಿದ್ದಾರೆ. ಇದನ್ನು ಸರಿಪಡಿಸುವ ಕೆಲಸವನನ್ನು ಜನರು ಮಾಡಬೇಕಿದೆ. ಎನ್‌ಆರ್‌ಸಿ ಹಾಗೂ ಸಿಎಎ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ತಡೆದುಕೊಳ್ಳಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ ಎಂದು ಉಗ್ರಪ್ಪ ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಎನ್‌ಆರ್‌ಸಿ ಜಾರಿಗೆ ತರುವುದಾಗಿ ಹೇಳುತ್ತಾರೆ. ಆದರೆ, ಪ್ರಧಾನಿ ನರೇಂದ್ರಮೋದಿ ಎನ್‌ಆರ್‌ಸಿ ಜಾರಿ ಮಾಡುವುದಿಲ್ಲ ಎನ್ನುತ್ತಾರೆ. ಜನರ ಆಕ್ರೋಶವನ್ನು ಎದುರಿಸಲಾರದೆ ಬಿಜೆಪಿ ಮುಖಂಡರು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

ರಾಜ್ಯದಲ್ಲಿಯೂ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ನಡುವೆ ಉತ್ತಮ ಬಾಂಧವ್ಯ ಇಲ್ಲದಂತಿದೆ. ಮುಖ್ಯಮಂತ್ರಿ ಒಂದು ಹೇಳಿದರೆ, ಗೃಹ ಸಚಿವ ಮತ್ತೊಂದು ಹೇಳಿಕೆ ನೀಡುತ್ತಾರೆ. ಕೇರಳದಿಂದ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆಗೆ ಬಂದರು ಎನ್ನುತ್ತಾರೆ. ಮುಖ್ಯಮಂತ್ರಿ ಬಳಿ ಗುಪ್ತಚರ ಇಲಾಖೆಯಿದೆ. ಕಪ್ಪು ಬಟ್ಟೆ ಧರಿಸಿಕೊಂಡು ಬಂದವರು ಯಾರು ಅನ್ನೋದು ಅವರಿಗೆ ಗೊತ್ತಾಗಲಿಲ್ಲವೇ ಎಂದು ಉಗ್ರಪ್ಪ ಪ್ರಶ್ನಿಸಿದರು.

ಗೋಲಿಬಾರ್‌ನಲ್ಲಿ ಮೃತಪಟ್ಟವರ ಮೇಲೆಯೇ ಎಫ್‌ಐಆರ್ ದಾಖಲು ಮಾಡಲಾಗಿದೆ. ಮೃತರ ಕುಟುಂಬಗಳಿಗೆ 10 ಲಕ್ಷ ರೂ.ಪರಿಹಾರ ನೀಡಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಸಣ್ಣ ಘಟನೆಯಾದರೂ ಸಿಬಿಐ ತನಿಖೆಗೆ ಬಿಜೆಪಿಯವರು ಒತ್ತಾಯಿಸುತ್ತಿದ್ದರು. ಈಗ ಈ ಘಟನೆ ಕುರಿತು ಸಿಬಿಐ ತನಿಖೆ ನಡೆಸಿ ಎಂದು ಅವರು ಆಗ್ರಹಿಸಿದರು.

ರಾಜ್ಯ ಸರಕಾರದ ಕುಮ್ಮಕ್ಕಿನಿಂದಲೇ ಗೋಲಿಬಾರ್ ನಡೆದಿದೆ. ಇದರ ಹೊಣೆಯನ್ನು ಬಿಜೆಪಿ ಸರಕಾರವೇ ಹೊರಬೇಕು. ಮುಸ್ಲಿಮರಿಗೆ ಪೌರತ್ವ ನೀಡಲು ಭಾರತ ಧರ್ಮ ಛತ್ರವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳುತ್ತಾರೆ. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವವಿಲ್ಲ ಎಂದು ಉಗ್ರಪ್ಪ ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News