ವಾರದಲ್ಲಿ ಐದು ದಿನ ಶಾಲೆಗಳಿಗೆ ಭೇಟಿ: ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚನೆ

Update: 2019-12-23 16:50 GMT

ಧಾರವಾಡ, ಡಿ.23: ಮಕ್ಕಳು, ಶಿಕ್ಷಕರು ಹಾಗೂ ಪಾಲಕರಲ್ಲಿ ಶಿಕ್ಷಣ ಮತ್ತು ಅಧ್ಯಯನದ ಪ್ರೀತಿ ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಜಿಲ್ಲೆಗಳ ಡಿಡಿಪಿಐ, ಬಿಇಓ ಅಧಿಕಾರಿಗಳು ವಾರದಲ್ಲಿ ಕನಿಷ್ಠ ಐದು ದಿನ ಶಾಲೆಗಳಿಗೆ ಭೇಟಿ ನೀಡಿ ಸಂವಾದ ನಡೆಸಿ, ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದರು.

ಸೋಮವಾರ ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾ ನಕಲು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಡಿವಾಣ ಹಾಕಲು ಇಲಾಖೆ ಕಠಿಣ ಕ್ರಮಕೈಗೊಳ್ಳಲಿದೆ ಎಂದರು.

ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಬಹಿಷ್ಕಾರ ಹಾಕಬಾರದು. ಶಿಕ್ಷಣದ ಗುಣಮಟ್ಟ ಅರಿಯಲು ವಿಷಯವಾರು ಮೌಲ್ಯಮಾಪನ ಕಾರ್ಯ ರಾಜ್ಯ ಮಟ್ಟದಲ್ಲಿ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ಮಕ್ಕಳಲ್ಲಿ ಬಾಲ್ಯ ವಿವಾಹ, ಲೈಂಗಿಕ ಕಿರುಕುಳ ತಡೆ ಮೊದಲಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಮೀನಾ ತಂಡಗಳನ್ನು ಕ್ರಿಯಾಶೀಲಗೊಳಿಸಬೇಕು. ತಾವು ಇದುವರೆಗೆ ಸುಮಾರು 150ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ್ದೇನೆ ಎಂದು ಅವರು ತಿಳಿಸಿದರು.

ಪರೀಕ್ಷೆಗಳೆಂದರೆ ಭಯವಿರಬಾರದು. ಪರೀಕ್ಷೆ ಎಂದರೆ ಅದು ರಣರಂಗವಲ್ಲ, ಅದು ಕ್ರೀಡಾರಂಗವಾಗಬೇಕು. ಆರೋಗ್ಯಕರ ಸ್ಪರ್ಧೆ ಇರಬೇಕು. ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಐಐಟಿ, ವೈದ್ಯಕೀಯ, ಐಎಎಸ್, ಐಪಿಎಸ್ ಸಾಧನೆಗೈದವರು, ಉನ್ನತ ಹಂತಕ್ಕೇರಿದವರ ಸಾಕಷ್ಟು ಉದಾಹರಣೆಗಳಿವೆ. ಅವುಗಳನ್ನು ತಿಳಿಹೇಳಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದು ಅವರು ಹೇಳಿದರು.

ಕೇರಳ ಮಾದರಿಯಲ್ಲಿ ರಾಜ್ಯದ ಸರಕಾರಿ ಶಾಲೆಗಳಲ್ಲಿನ ಮಕ್ಕಳಲ್ಲಿ ಕುಡಿಯುವ ನೀರಿನ ಪ್ರವೃತ್ತಿ ಹೆಚ್ಚಿಸಲು ‘ವಾಟರ್ ಬೆಲ್’ ಪ್ರಾರಂಭಿಸಲು ಆದೇಶ ಹೊರಡಿಸಲಾಗಿದೆ. ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಆಯೋಜಿಸುವ ಕುರಿತು ಇನ್ನೊಂದು ವಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ಪಾಲಕರಿಂದ ಪ್ರತಿಜ್ಞೆ: ಮಕ್ಕಳ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಕೇರಳದ ಅಲೆಪ್ಪಿಜಿಲ್ಲೆಯಲ್ಲಿ ಸಂಜೆಯ ಸಮಯದಲ್ಲಿ ಟಿವಿ ನೋಡದೇ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಸುವುದಾಗಿ ಘೋಷಿಸಿ ಪಾಲಕರಿಂದ ಪ್ರತಿಜ್ಞೆ ಮಾಡಿಸಲಾಗಿದೆ. ಈ ಪ್ರತಿಜ್ಞಾ ಸ್ವೀಕಾರ ಕಾರ್ಯ ನಮ್ಮ ರಾಜ್ಯದಲ್ಲಿಯೂ ನಡೆಯಬೇಕು ಎಂದು ಸುರೇಶ್ ಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಬೆಲ್ಲದ್, ಜಿ.ಪಂ.ಸಿಇಓ ಡಾ.ಬಿ.ಸಿ.ಸತೀಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್, ಸಿಸ್ಲೆಪ್ ನಿರ್ದೇಶಕ ಬಿ.ಎಸ್.ರಘುವೀರ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ಬಿ.ಗುಡಸಿ ಮತ್ತಿತರರು ಉಪಸ್ಥಿತರಿದ್ದರು.

ಜ.16ರಂದು ಪರೀಕ್ಷಾ ಪೆ ಚರ್ಚಾ

ಜನವರಿ 16ರಂದು ಪ್ರಧಾನಿ ನರೇಂದ್ರ ಮೋದಿ ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ ನಡೆಸಲಿದ್ದಾರೆ. ಪ್ರತಿ ಜಿಲ್ಲೆಗಳಿಂದಲೂ ಆಯ್ದ ಮಕ್ಕಳನ್ನು ಕಾರ್ಯಕ್ರಮಕ್ಕೆ ಶಿಫಾರಸ್ಸು ಮಾಡಬೇಕು. ಆಯ್ಕೆಯಾದ ಮಕ್ಕಳು ಹೊಸದಿಲ್ಲಿಯಲ್ಲಿ ಪ್ರಧಾನಿ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ. ಅಂದು ಎಲ್ಲ ಶಾಲೆಗಳಲ್ಲಿ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಬೇಕು.

-ಎಸ್.ಸುರೇಶ್ ಕುಮಾರ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News