ರಾಜ್ಯದಲ್ಲಿ ಬಂಡವಾಳ ಹೂಡಿಕೆ: ಮುಂಬೈಯಲ್ಲಿ ಉದ್ಯಮಿಗಳೊಂದಿಗೆ ಶೆಟ್ಟರ್, ಜೋಶಿ ಸರಣಿ ಸಭೆ

Update: 2019-12-23 17:25 GMT

ಬೆಂಗಳೂರು, ಡಿ.23: ರಾಜ್ಯದ ಎರಡನೆ ಹಂತದ ನಗರಗಳು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಕೈಗಾರಿಕಾ ಇಲಾಖೆ ಸಚಿವ ಜಗದೀಶ್ ಶೆಟ್ಟರ್ ಮತ್ತು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಮುಂಬೈಯಲ್ಲಿಂದು ದೇಶದ ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ಸರಣಿ ಸಭೆಯನ್ನು ನಡೆಸಲಾಯಿತು.

ಟಾಟಾ ಗ್ರೂಪಿನ ಅಧ್ಯಕ್ಷ ಚಂದ್ರಶೇಖರನ್, ಮಹೀಂದ್ರ ಲಿಮಿಟೆಡ್‌ನ ಅಧ್ಯಕ್ಷ ಆನಂದ್ ಮಹೀಂದ್ರ, ಗೋದ್ರೇಜ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಆದಿ ಗೋದ್ರೇಜ್ ಸೇರಿದಂತೆ ಹಲವಾರು ಪ್ರಮುಖ ಕೈಗಾರಿಕೋದ್ಯಮಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಚರ್ಚೆ ನಡೆಸಲಾಯಿತು.

‘ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ-2020’ ಮೂಲಕ ಉತ್ತರ ಕರ್ನಾಟದಲ್ಲೂ ಬಂಡವಾಳ ಹೂಡಿಕೆ ಮಾಡಲು ಮೂಲಭೂತ ಸೌಕರ್ಯಗಳಿವೆ ಎನ್ನುವುದನ್ನು ಕೈಗಾರಿಕೋದ್ಯಮಿಗಳಿಗೆ ತಿಳಿಸಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ದೇಶದ ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಿದಾಗ ಇದರ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಲಾಗಿದ್ದು, ರಾಜ್ಯದಲ್ಲಿ ಹೂಡಿಕೆಯನ್ನು ಮಾಡುವಂತೆ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಅವರು ಹೇಳಿದರು.

ಸಂಜೆ ನಾರಿಮನ್ ಪಾಯಿಂಟ್‌ನಲ್ಲಿರುವ ಟ್ರಿಡೆಂಟ್ ಹೊಟೇಲ್ ನಲ್ಲಿ ರೋಡ್ ಶೋ ನಡೆಯಿತು. ರಾಜ್ಯದಲ್ಲಿರುವ ಕೈಗಾರಿಕೆಗೆ ಪೂರಕವಾದ ವಾತಾವರಣ ಹಾಗೂ ಸೌಲಭ್ಯಗಳ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಮಾಹಿತಿಯನ್ನು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News