“ತಾರತಮ್ಯದ ಕಾನೂನಿಗೆ ಸಹಿ ಹಾಕಿದ ರಾಷ್ಟ್ರಪತಿಯಿಂದ ಪದಕ ಸ್ವೀಕರಿಸುವುದಿಲ್ಲ”

Update: 2019-12-23 17:42 GMT

ಹೊಸದಿಲ್ಲಿ, ಡಿ. 23: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಾಂಡಿಚೇರಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾದ ಕಾರ್ತಿಕಾ ಬಿ. ಕುರುಪ್, ಎ.ಎಸ್. ಅರುಣ್ ಕುಮಾರ್ ಹಾಗೂ ಎಸ್.ಎ. ಮಹಾಲಾ ಸೋಮವಾರ ಸಂಜೆ ನಡೆದ ಘಟಿಕೋತ್ಸವ ಕಾರ್ಯಕ್ರಮ ಬಹಿಷ್ಕರಿಸಿದ್ದಾರೆ.

ಇಲೆಕ್ಟ್ರಾನಿಕ್ಸ್ ಮೀಡಿಯಾದಲ್ಲಿ ಎಂಎಸ್‌ಸಿ ಸ್ನಾತಕೋತ್ತರ ಪದವಿ ಪಡೆದಿರುವ 28ರ ಹರೆಯದ ಕಾರ್ತಿಕಾ, “ಜನರ ಅಭಿಪ್ರಾಯವನ್ನು ಕೇಳಿಸಿಕೊಳ್ಳದ ಸರಕಾರದಿಂದ ಉಪಯೋಗವಾದರೂ ಏನು ?” ಎಂದು ಪ್ರಶ್ನಿಸಿದ್ದಾರೆ. ಪ್ರಸಕ್ತ ಕೇರಳದ ಕೊಟ್ಟಾಯಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ತಿಕಾ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದವಿ ಸ್ವೀಕರಿಸಲು ನಿರಾಕರಿಸಿದ್ದಾರೆ. ‘‘ತಾರತಮ್ಯದ ಕಾನೂನಿಗೆ ಅಂತಿಮ ಸಹಿ ಹಾಕಿದ ರಾಷ್ಟ್ರಪತಿ ಅವರಿಂದ ಪದವಿ ಸ್ವೀಕರಿಸಲು ನನಗೆ ಇಷ್ಟವಿಲ್ಲ’’ ಎಂದು ಅವರು ಹೇಳಿದ್ದಾರೆ. ಘಟಿಕೋತ್ಸವ ಬಹಿಷ್ಕರಿಸಿದ ನಿರ್ಧಾರವನ್ನು ಅವರ ತನ್ನ ವ್ಯಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿದ್ದಾರೆ. ಈ ಸ್ಟೇಟಸ್ ಈಗ ವೈರಲ್ ಆಗಿದೆ.

ತನ್ನ ನಿರ್ಧಾರ ವೈಯಕ್ತಿಕ ಎಂದು ಹೇಳಿರುವ ಕಾರ್ತಿಕಾ, ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವ ಕಾನೂನಿಗೆ ಬೆಂಬಲ ನೀಡಲು ಸಾಧ್ಯವಿಲ್ಲ. ಆದುದರಿಂದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಘಟಿಕೋತ್ಸವವನ್ನು ಬಹಿಷ್ಕರಿಸಿದ ಇನ್ನೋರ್ವ ವಿದ್ಯಾರ್ಥಿ 34 ವರ್ಷದ ಅರುಣ್ ಕುಮಾರ್. ಮಾನವಶಾಸ್ತ್ರದ ವಿದ್ಯಾರ್ಥಿಯಾಗಿರುವ ಅವರು 2018 ಅಕ್ಟೋಬರ್‌ನಲ್ಲಿ ತನ್ನ ಪಿಎಚ್‌ಡಿ ಪ್ರಬಂಧವನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದಾರೆ ಹಾಗೂ ಡಾಕ್ಟರೇಟ್ ಪದವಿಗಾಗಿ ಕಾಯುತ್ತಿದ್ದಾರೆ.

 ‘‘ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಹಾಗೂ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಬೀದಿಗಿಳಿದಿರುವ ಲಕ್ಷಾಂತರ ಪ್ರತಿಭಟನಕಾರರಿಗೆ ಕೂಡ ನಾನು ಬೆಂಬಲ ನೀಡುತ್ತೇನೆ’’ ಎಂದು ಅವರು ಹೇಳಿದ್ದಾರೆ. ‘‘ರಾಷ್ಟ್ರಪತಿ ಅವರಿಂದ ಪದವಿ ಪಡೆಯಲು ನಾನು ಬಯಸುತ್ತಿಲ್ಲ. ಮಸೂದೆಯನ್ನು ಸಂಸತ್ತಿಗೆ ಹಿಂದೆ ಕಳುಹಿಸುವ ಅವಕಾಶ ಅವರಿಗಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಬದಲಾಗಿ ಸಹಿ ಹಾಕಿದರು. ಅದನ್ನು ಕಾನೂನು ಮಾಡಿದರು’’ ಎಂದು ಅವರು ಹೇಳಿದ್ದಾರೆ.

 ಘಟಿಕೋತ್ಸವ ಬಹಿಷ್ಕರಿಸಿದ ಮತ್ತೋರ್ವ ವಿದ್ಯಾರ್ಥಿನಿ 30ರ ಹರೆಯದ ಎಸ್.ಎ. ಮೆಹಲಾ. ಮಾನವಶಾಸ್ತ್ರ ವಿಷಯದಲ್ಲಿ ಚಿನ್ನದ ಪದಕ ಪಡೆದಿರುವ ಮೆಹಲಾ ಈ ವರ್ಷ ಫೆಬ್ರವರಿಯಲ್ಲಿ ತನ್ನ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ. ಧರ್ಮ ಹಾಗೂ ಸಮುದಾಯದ ಆಧಾರದಲ್ಲಿ ತಾರತಮ್ಯ ಎಸಗುವುದನ್ನು ಯಾವೊಬ್ಬ ಭಾರತೀಯ ನಾಗರಿಕನು ಕೂಡ ಸಹಿಸಲು ಸಾಧ್ಯವಿಲ್ಲ.

ಇಂದು ಮುಸ್ಲಿಂ ನಾಳೆ ಕ್ರಿಶ್ಚಿಯನ್, ನಾಳಿದ್ದು ದಲಿತರು ಹಾಗೂ ಇತರ ಸಮುದಾಯದವರು. ಇದು ಜನರನ್ನು ವಿಭಜಿಸುತ್ತದೆ ಹಾಗೂ ಇದು ನಡೆಯಲು ನಾವು ಅವಕಾಶ ನೀಡಬಾರದು ಎಂದು ಅವರು ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಬಗ್ಗೆ ಉಲ್ಲೇಖಿಸಿದ ಅವರು, ‘‘ಇದಕ್ಕೆ ನಾವು ವಿದ್ಯಾವಂತರಾಗುತ್ತಿರುವುದು. ನಾವು ಅಧ್ಯಯನ ನಡೆಸುತ್ತೇವೆ. ಆದುದರಿಂದ ತರ್ಕಿಸುತ್ತೇವೆ ಹಾಗೂ ಪ್ರಶ್ನಿಸುತ್ತೇವೆ. ನಮಗೆ ತೊಂದರೆ ಉಂಟಾದಾಗ ಅದರ ವಿರುದ್ಧ ಧ್ವನಿ ಎತ್ತಬೇಕು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News