ಎಸ್‌ಡಿಪಿಐ, ಪಿಎಫ್‌ಐ ನಿಷೇಧಕ್ಕೆ ಚಿಂತನೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌

Update: 2019-12-24 12:42 GMT

ಬೆಂಗಳೂರು, ಡಿ.24: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ, ಆ ನಂತರ ನಡೆದ ಗಲಭೆಗೆ ಎಸ್‌ಡಿಪಿಐ, ಪಿಎಫ್‌ಐ ನೇರ ಕಾರಣವಾಗಿರುವುದರಿಂದ ಆ ಸಂಘಟನೆಯ ನಿಷೇಧಕ್ಕೆ ಚಿಂತನೆ ನಡೆಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ತಿಳಿಸಿದ್ದಾರೆ. 

ಮಂಗಳಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸುತ್ತಿರುವ ಎಸ್‌ಡಿಪಿಐ, ಪಿಎಫ್‌ಐ ನಿಷೇಧಕ್ಕೆ ಮೊದಲಿನಿಂದಲೂ ಒತ್ತಾಯ ಮಾಡುತ್ತಾ ಬಂದಿದ್ದೇವೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.

ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಕಲ್ಲು ತೂರಾಟ ನಡೆಸಿದವರು ಯಾರು. ಅವರು ಎಲ್ಲಿಂದ ಬಂದಿದ್ದರು. ಅವರ ಉದ್ದೇಶ ಏನಾಗಿತ್ತು ಎಂಬುದಕ್ಕೆಲ್ಲಾ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸಾಕ್ಷಾಧಾರಗಳಿವೆ. ಗಲಭೆ ಮಾಡಲೆಂದೇ ಕೇರಳದಿಂದ ಕೆಲವು ದುಷ್ಕರ್ಮಿಗಳು ಬಂದಿದ್ದರು. ಆ ಬಗ್ಗೆ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಕ್ಷಾಧಾರಗಳನ್ನು ಜನತೆಯ ಮುಂದೆ ಇಡಲಾಗುವುದು ಎಂದು ಅವರು ಹೇಳಿದರು.

ಕಾಶ್ಮೀರದಲ್ಲಿ ಸೈನಿಕರ ಮೇಲೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ಎಸೆಯಲಾಗುತ್ತಿತ್ತು. ಈಗ ಅದೇ ಮಾದರಿಯಲ್ಲಿ ಮಂಗಳೂರಿನಲ್ಲೂ ಹೊರರಾಜ್ಯದವರು ಗಲಭೆ ನಡೆಸಿದ್ದಾರೆ. ಆ ಮೂಲಕ ಕೋಮುಗಲಭೆಗೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆ ಕುಮ್ಮಕ್ಕು ನೀಡುತ್ತಿವೆ ಎಂದು ಅವರು ಆಪಾದಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದಾಗಲೇ ಗಲಭೆ ನಡೆಯುವ ಮುನ್ಸೂಚನೆ ಸಿಕ್ಕಿತ್ತೆಂದು ಅನುಮಾನ ವ್ಯಕ್ತಪಡಿಸಿದ ಅವರು, ಮರುದಿನವೇ ಮಂಗಳೂರಿನಲ್ಲಿ ಪ್ರತಿಭಟನೆ, ಕಲ್ಲುತೂರಾಟ ನಡೆದಿದೆ. ಕೇರಳ ಮೂಲದ ದುಷ್ಕರ್ಮಿಗಳು ಗಲಭೆ ನಡೆಸಿದ್ದಾರೆಂದು ಅವರು ಹೇಳಿದರು.

ಪ್ರತಿಭಟನೆ ನಡೆಸುವ ಮುನ್ನ ನಗರ ಪೊಲೀಸ್ ಆಯುಕ್ತರು ಎಲ್ಲ ಸಂಘಟನೆಗಳ ಮುಖಂಡರನ್ನು ಕರೆಸಿ ಶಾಂತಿಸಭೆ ನಡೆಸಿದ್ದರು. ಅವರ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ ಕಿಡಿಗೇಡಿಗಳು ಅವರ ಮೇಲೆ ಹಲ್ಲೆ ನಡೆಸಿದಾಗ ಸುಮ್ಮನೆ ಕೂರಲು ಸಾಧ್ಯವೇ. ಗೂಂಡಾಗಳು ಮತ್ತು ಸಮಾಜಘಾತುಕ ಶಕ್ತಿಗಳೇ ಇದರ ಹಿಂದಿದ್ದಾರೆ ಎಂದು ಅವರು ಆರೋಪಿಸಿದರು.

ನಾನು ಒಮ್ಮೆ ಭಾಷಣ ಮಾಡುವಾಗ ಬೆಂಕಿ ಹಚ್ಚುತ್ತೇನೆಂದು ಹೇಳಿದ್ದೆ. ಭಾವೋದ್ವೇಗಕ್ಕೆ ಒಳಗಾಗಿ ಇಂತಹ ಹೇಳಿಕೆ ನೀಡಿದ್ದೆ. ಆ ನಂತರ ಕ್ಷಮೆ ಕೇಳಿದ್ದೆ. ಆ ಸಂದರ್ಭದಲ್ಲಿ ಗಲಭೆ ಆಗಲಿಲ್ಲ. ಆದರೆ, ಯು.ಟಿ.ಖಾದರ್ ಹೇಳಿದ ನಂತರ ಗಲಭೆ ನಡೆದಿದ್ದು ಹೇಗೆ?
-ನಳಿನ್‌ ಕುಮಾರ್ ಕಟೀಲ್, ರಾಜ್ಯಾಧ್ಯಕ್ಷ, ಬಿಜೆಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News