ಈಗ ವೈರಲ್ ಆಗುವ ವಿಡಿಯೋ ಘಟನೆ ದಿನವೇ ಪೊಲೀಸರಿಗೆ ಯಾಕೆ ಸಿಗಲಿಲ್ಲ: ಕುಮಾರಸ್ವಾಮಿ ಪ್ರಶ್ನೆ

Update: 2019-12-24 14:11 GMT

ಬೆಂಗಳೂರು, ಡಿ. 24: ಗೋಲಿಬಾರ್ ಪ್ರಕರಣ ಸಮರ್ಥನೆಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಮತ್ತು ಪೊಲೀಸರ ಹೇಳಿಕೆಯಲ್ಲಿ ಗೊಂದಲಗಳಿವೆ. ಅವರು ಹೇಳಿದ್ದನ್ನ ಕೇಳಲು ನಾವು ಕಿವಿ ಮೇಲೆ ಹೂ ಮುಡಿದುಕೊಂಡಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಚನ್ನಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಗಳೂರು ಗಲಭೆಗೆ ಕಾರಣರಾದವರು ಯಾರೇ ಆದರೂ ಸರಕಾರ ಕ್ರಮ ಕೈಗೊಳ್ಳಲಿ. ಆದರೆ, ಈಗ ವೈರಲ್ ಆಗಿರುವ ವಿಡಿಯೊ ಸತ್ಯಾಸತ್ಯತೆ ಬಗ್ಗೆ ಮೊದಲು ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಮಂಗಳೂರು ಗಲಭೆ ಕುರಿತ ವಿಡಿಯೊವೊಂದು ಈಗ ವೈರಲ್ ಆಗಿದೆ. ಆದರೆ ಅದು ಎಷ್ಟರಮಟ್ಟಿಗೆ ನಿಜ. ಘಟನೆ ದಿನವೇ ಪೊಲೀಸರಿಗೆ ಯಾಕೆ ಸಿಗಲಿಲ್ಲ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಗೋಲಿಬಾರ್ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದರು.

ಎಚ್‌ಡಿಕೆಗೆ ಅಡ್ರಸ್ ಗೊತ್ತಿಲ್ಲ ಎನ್ನುವವರು ಹಿಂದೊಮ್ಮೆ ನನ್ನ ವಿಳಾಸವನ್ನು ಹುಡುಕಿಕೊಂಡು ಬಂದಿದ್ದನ್ನೇ ಮರೆತಿದ್ದಾರೆ. ಜನರೇ ಮುಂದೆ ನನ್ನ ಅಡ್ರಸ್ ತೋರಿಸುತ್ತಾರೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

ರಾಮನಗರ ಜಿಲ್ಲೆ ಅಭಿವೃದ್ಧಿ ಬಗ್ಗೆ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ನನಗಿಂತ ಬುದ್ಧಿವಂತ ಇದ್ದಾರೆ. ನಾನು ಯಾರಿಗೂ ಸುಳ್ಳು ಸರ್ಟಿಫಿಕೆಟ್ ಕೊಡಿಸಿಲ್ಲ. ರಾಜ್ಯದಲ್ಲಿ ಒಬ್ಬರಿಗೆ ನರ್ಸ್ ರಾಜ್ ಎಂಬ ಬಿರುದಿದೆ. ಅದು ಏಕೆ ಬಂತು ಎನ್ನುವುದನ್ನು ಅವರು ಅರಿಯಲಿ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News