ಹಿಂದೂ-ಮುಸ್ಲಿಮರನ್ನು ದೂರ ಮಾಡಲು ಕಾಂಗ್ರೆಸ್ ಯತ್ನ: ಸಚಿವ ಈಶ್ವರಪ್ಪ

Update: 2019-12-24 14:12 GMT

ಬೆಂಗಳೂರು, ಡಿ.24: ಹಿಂದೂ ಮತ್ತು ಮುಸ್ಲಿಮರನ್ನು ದೂರ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದು, ಈ ಯತ್ನದಲ್ಲಿ ಕಾಂಗ್ರೆಸ್ ಯಶಸ್ಸು ಕಾಣುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಮಂಗಳವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬ್ರಿಟೀಷರು ಭಾರತವನ್ನು ಒಡೆದರು. ಇದೀಗ ಕಾಂಗ್ರೆಸ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಂದಿಟ್ಟುಕೊಂಡು ಹಿಂದೂ ಮತ್ತು ಮುಸ್ಲಿಮರನ್ನು ದೂರ ಮಾಡಲು ಯತ್ನಿಸುತ್ತಿದೆ. ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಲು ಸ್ವತಃ ಡಾ.ಮನಮೋಹನ್ ಸಿಂಗ್ ಯೋಚಿಸಿದ್ದರು ಎಂದು ಅವರು ಹೇಳಿದರು.

ರಾಜಕೀಯಕ್ಕಾಗಿ ಮುಸ್ಲಿಮರನ್ನು ಎತ್ತಿ ಕಟ್ಟುತ್ತಿರುವ ಕಾಂಗ್ರೆಸ್, ಗಲಭೆಗಳನ್ನು ಉಂಟು ಮಾಡಲು ಅವರನ್ನು ಬೀದಿಗೆ ಇಳಿಸುತ್ತಿದೆ. ಹಿಂದೂಗಳಿಂದ ಮುಸ್ಲಿಮರನ್ನು ದೂರವಿಡುವ ಕಾಂಗ್ರೆಸ್ ಪ್ರಯತ್ನ ವಿಫಲವಾಗುತ್ತದೆ. ಕಾಂಗ್ರೆಸ್‌ನ ಕುತಂತ್ರದಿಂದಲೇ ಗಲಭೆಗಳು ನಡೆದಿವೆ ಎಂದು ಈಶ್ವರಪ್ಪ ಆರೋಪಿಸಿದರು.

ಮಂಗಳೂರಿನಲ್ಲಿ ನಡೆದ ಗಲಭೆ ಹಿಂದಿರುವ ಶಕ್ತಿಗಳು ಯಾರೆಂಬುದು ತನಿಖೆಯಿಂದ ಗೊತ್ತಾಗುತ್ತದೆ. ಈಗಾಗಲೇ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಇನ್ನೂ ನಷ್ಟ ಅನುಭವಿಸುತ್ತದೆ. ಇದೇ ಪ್ರಯತ್ನಗಳನ್ನು ಮುಂದುವರೆಸಿದರೆ ಈಗಾಗಲೇ ನಶಿಸಿ ಹೋಗಿರುವ ಕಾಂಗ್ರೆಸ್ ಹೇಳಹೆಸರಿಲ್ಲದಂತಾಗುತ್ತದೆ ಎಂದು ಅವರು ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಚಿತ್ರಹಿಂಸೆ ಅನುಭವಿಸಿದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಅಷ್ಟೇ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಕಾಯ್ದೆಯಿಂದ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜೊತೆಯಲ್ಲಿ ಕೊಂಡೊಯ್ಯುವ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಬಿಜೆಪಿಯ ಮಂತ್ರವಾಗಿದೆ ಎಂದು ಈಶ್ವರಪ್ಪ ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಗೆದ್ದಿರುವುದರಿಂದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ. ಅವರ ಋಣ ತೀರಿಸಲು ಅಷ್ಟೂ ಶಾಸಕರಿಗೆ ಮಂತ್ರಿ ಸ್ಥಾನ ಕೊಡಲಾಗುವುದು ಎಂದು ಈಶ್ವರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News