ಅಸ್ಸಾಂನ ಡಿಟೆನ್ಷನ್ ಸೆಂಟರ್‌ನಲ್ಲಿ 45 ಮಂದಿ ಸಾವನ್ನಪ್ಪಿದ್ದಾರೆ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

Update: 2019-12-24 16:51 GMT

ಕಲಬುರ್ಗಿ, ಡಿ.24: ಒಂದೂವರೆ ತಿಂಗಳ ಹಸುಗೂಸು ಸೇರಿದಂತೆ ಬರೋಬ್ಬರಿ 45 ಜನರು ಅಸ್ಸಾಂನ ಡಿಟೆನ್ಷನ್ ಸೆಂಟರ್‌ನಲ್ಲಿ(ತಾತ್ಕಾಲಿಕ ಕೇಂದ್ರ) ಸಾವನ್ನಪ್ಪಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಸ್ಸಾಂನಲ್ಲಿ ಜಾರಿಯಾದ ಎನ್‌ಆರ್‌ಸಿ ಪ್ರಕ್ರಿಯೆ ಅನ್ವಯ 19 ಲಕ್ಷ ಜನ ಭಾರತೀಯ ನಾಗರಿಕರಲ್ಲ ಎಂದು ಗುರುತಿಸಲಾಗಿದೆ. ಅವರಲ್ಲಿ 13 ಲಕ್ಷ ಜನ ಹಿಂದೂಗಳಿದ್ದು, ಇದೀಗ ಈ ಕಾಯ್ದೆಗೆ ತೀವ್ರ ಪ್ರತಿರೋಧ ಎದುರಾಗಿದೆ. ಅಷ್ಟೇ ಅಲ್ಲದೆ, ಡಿಟೆನ್ಷನ್ ಸೆಂಟರ್‌ನಲ್ಲಿ 45 ಜನ ಸಾವನ್ನಪ್ಪಿದ್ದಾರೆ ಎಂದರು.

ಅಸ್ಸಾಂನಲ್ಲಿ ಎನ್‌ಆರ್‌ಸಿ ಪ್ರಕಾರ ಗಣತಿ ಮಾಡಲು ಐದು ವರ್ಷ ಅವಧಿ ತೆಗೆದುಕೊಳ್ಳಲಾಗಿದೆ. ಜತೆಗೆ, 50 ಸಾವಿರ ಸರಕಾರಿ ನೌಕರರನ್ನು ಬಳಸಿ, ಸುಮಾರು 1,500 ಕೋಟಿ ಖರ್ಚು ಮಾಡಲಾಗಿದೆ ಎಂದ ಅವರು, ಈಗ ಎನ್‌ಆರ್‌ಸಿ ಪ್ರಕ್ರಿಯೆ ದೇಶದೆಲ್ಲೆಡೆ ಜಾರಿಗೆ ಮೋದಿ ಸರಕಾರ ಹೊರಟ್ಟಿದ್ದು, ಇದಕ್ಕಾಗಿ ಎಷ್ಟು ವರ್ಷ, ಎಷ್ಟು ಕೋಟಿ ವ್ಯಯವಾಗಲಿದೆ. ಇದು ಯಾರ ದುಡ್ಡು ಎನ್ನುವ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕು ಎಂದು ತಿಳಿಸಿದರು.

ದಾಖಲೆ ಇಲ್ಲ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಭಾರತದ ಮೂಲ ಆಶಯಗಳಿಗೆ ಧಕ್ಕೆ ಉಂಟು ಮಾಡಲಿದೆ.ಇದು ದೇಶವನ್ನು ಕೇಸರಿಕರಣಗೊಳಿಸಲು ಆರೆಸ್ಸೆಸ್‌ನ ಷಡ್ಯಂತ್ರದ ಭಾಗವಾಗಿದೆ. ಇದನ್ನು, ಕೇವಲ ಮುಸ್ಲಿಮರಷ್ಟೇ ಅಲ್ಲ, ಬಡವರು, ಆದಿವಾಸಿಗಳು, ಅನಾಥರು, ಭೂರಹಿತರು, ಹಿರಿಯ ನಾಗರಿಕರು, ವಲಸೆ ಕಾರ್ಮಿಕರು ಸಂಕಷ್ಟಕ್ಕೊಳಗಾಗಲಿದ್ದಾರೆ.ಅಷ್ಟೇ ಅಲ್ಲದೆ, ದೇಶದ ಶೇಕಡ 26ರಷ್ಟು ಜನರ ಬಳಿ ಯಾವುದೇ ದಾಖಲೆಗಳೇ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ನುಡಿದರು.

ದೇಶದ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ವಿವಾದಿತ ಕಾಯ್ದೆ ಅನ್ನು ಜಾರಿಗೊಳಿಸುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಅದೇ ರೀತಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಇಂತಹ ಕಾಯ್ದೆಗಳನ್ನು ಜಾರಿಗೊಳಿಸುವ ಸರ್ವಾಧಿಕಾರಿ ಧೋರಣೆಯನ್ನು ಬಿಜೆಪಿ ಕೈಬಿಡಬೇಕೆಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಪ್ರಮುಖರಿದ್ದರು.

ಮೋದಿ-ಶಾ ಉತ್ತರಿಸಬೇಕು

ಅಸ್ಸಾಂನಲ್ಲಿ ಎನ್‌ಆರ್‌ಸಿ ಪ್ರಕಾರ ಗಣತಿ ಮಾಡಲು ಐದು ವರ್ಷ ಅವಧಿ ತೆಗೆದುಕೊಳ್ಳಲಾಗಿದೆ. ಜತೆಗೆ, 50 ಸಾವಿರ ಸರಕಾರಿ ನೌಕರರನ್ನು ಬಳಸಿ, ಸುಮಾರು 1,500 ಕೋಟಿ ಖರ್ಚು ಮಾಡಲಾಗಿದೆ ಎಂದ ಅವರು, ಈಗ ಎನ್‌ಆರ್‌ಸಿ ಪ್ರಕ್ರಿಯೆ ದೇಶದೆಲ್ಲೆಡೆ ಜಾರಿಗೆ ಮೋದಿ ಸರಕಾರ ಹೊರಟ್ಟಿದ್ದು, ಇದಕ್ಕಾಗಿ ಎಷ್ಟು ವರ್ಷ, ಎಷ್ಟು ಕೋಟಿ ವ್ಯಯವಾಗಲಿದೆ. ಇದು ಯಾರ ದುಡ್ಡು ಎನ್ನುವ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕು.

-ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News