×
Ad

ಬಿಜೆಪಿ ದೇಶ ವಿಭಜಿಸಲು ಹೊರಟಿದೆ: ಮಾಜಿ ಸಂಸದ ಐ.ಜಿ.ಸನದಿ

Update: 2019-12-24 22:48 IST

ಹುಬ್ಬಳ್ಳಿ, ಡಿ.24: ದೇಶದಲ್ಲಿ ನಾವೆಲ್ಲರೂ ಸೌಹಾರ್ದದಿಂದ ಬದುಕುತ್ತಿದ್ದೇವೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಪೌರತ್ವ ತಿದ್ಧುಪಡಿ ಕಾಯ್ದೆಯ ಮೂಲಕ ದೇಶ ಇಬ್ಬಾಗ ಮಾಡಲು ಹೊರಟಿದೆ ಎಂದು ಮಾಜಿ ಸಂಸದ ಐ.ಜಿ.ಸನದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವಂತಹ ಕೆಲಸ ಮಾಡುತ್ತಿದೆ. ಇದರಿಂದ ದೇಶಕ್ಕೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚಾಗಲಿದೆ. ಆದುದರಿಂದ ಕೂಡಲೇ ಸರಕಾರ ಜಾರಿಗೆ ಮುಂದಾಗಿರುವ ಎನ್‌ಆರ್‌ಸಿ ಹಾಗೂ ಸಿಎಎ ಅನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬಿಜೆಪಿಯವರು ಜಾರಿಗೆ ತರುತ್ತಿರುವ ಕಾನೂನುಗಳಿಂದ ಅಲ್ಪಸಂಖ್ಯಾತರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದರೆ, ಕೇಂದ್ರ ಸರಕಾರ ಯಾವುದೇ ಪೂರ್ವಾಪರ ಯೋಚಿಸದೇ ಕಾನೂನುಗಳನ್ನು ಮಾಡುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಬೇಕಾದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದೇಶ ಅಂದರೆ ಧರ್ಮಛತ್ರವಲ್ಲ ಎಂಬುದು ನಮಗೂ ತಿಳಿದಿದೆ. ಸಚಿವರು ಜವಾಬ್ದಾರಿ ಸ್ಥಾನದಲ್ಲಿದ್ದು, ಇಂತಹ ಹೇಳಿಕೆ ನೀಡುವುದು ಅವರ ಘನತೆಗೆ ತಕ್ಕುದಲ್ಲ ಎಂದು ತಿಳಿಸಿದರು.

ನಮ್ಮದು ಗಾಂಧೀಯವರ ಹಾದಿಯಲ್ಲಿನ ಶಾಂತಿಯುತ ಪ್ರತಿಭಟನೆಯಾಗಿದೆ. ನಾವು ಯಾವುದೇ ಅಹಿತರ ಘಟನೆಗಳು ನಡೆಸಲು ಆಸ್ಪದ ನೀಡುವವರಲ್ಲ. ಶಾಂತಿ, ಸೌಹಾರ್ದತೆಯಿಂದಲೇ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಅವರು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News