ಮಂಗಳೂರು ಘಟನೆಗೆ ವಿರೋಧ ಪಕ್ಷಗಳ ಷಡ್ಯಂತರವೇ ಕಾರಣ: ಸಚಿವ ವಿ.ಸೋಮಣ್ಣ

Update: 2019-12-24 17:31 GMT

ಮೈಸೂರು,ಡಿ.24: ಮಂಗಳೂರು ಘಟನೆಗೆ ವಿರೋಧ ಪಕ್ಷಗಳ ಷಡ್ಯಂತರವೇ ಕಾರಣ ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ಉಪಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ವಿರೋಧ ಪಕ್ಷಗಳು ಜನರನ್ನು ಈ ರೀತಿ ಎತ್ತಿಕಟ್ಟುವ ಕೆಲಸ ಮಾಡಬಾರದು. ಮಂಗಳೂರು ಗಲಾಟೆ ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಈಗ ಸಿಸಿಟಿವಿ ದೃಶ್ಯಗಳು ಸಾಕ್ಷಿ ಒದಗಿಸಿವೆ. ಇದು ಸಂಚಿನಿಂದ ನಡೆದ ಗಲಾಟೆ. ಆಟೋಗಳಲ್ಲಿ ಕಲ್ಲು ತಂದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಈ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಉಪಚುನಾವಣೆಯಲ್ಲಿ ವಿಶ್ವನಾಥ್ ಸೋಲು ನನಗೆ ನೋವು ತಂದಿದೆ. ಅವರಿಗೆ ಸ್ಥಾನಮಾನ ನೀಡುವ ಕುರಿತು ಹೈಕಮಾಂಡ್ ಹಾಗೂ ಸಿಎಂ ಯಡಿಯೂರಪ್ಪ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News