ಮೈಸೂರು: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ವಿವಿಧ ಬಣ್ಣಗಳ ಹೂವಿನ ಕಲಾಕೃತಿಗಳು
ಮೈಸೂರು,ಡಿ.24: ಪ್ರತಿವರ್ಷದಂತೆ ಈ ವರ್ಷವೂ ಸಹ ಇಂದಿನಿಂದ ಜನವರಿ 2ರವರೆಗೆ ಮೈಸೂರಿನಲ್ಲಿ ಮಾಗಿ ಉತ್ಸವ ಆಯೋಜಿಸಲಾಗಿದ್ದು, ಮಾಗಿ ಉತ್ಸವದ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ಅನಾವರಣಗೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಚಾಲನೆ ನೀಡಿದರು.
ಬೆಂಗಳೂರು ಅರಮನೆ, ಬೆಂಕಿಗಾಹುತಿಯಾದ ಮೈಸೂರಿನ ಗಂಧದ ಅರಮನೆ, ಆನೆಗಾಡಿ, ಕುದುರೆ ಸಾರೋಟು ಸೇರಿದಂತೆ ಅಂದಿನ ಆಳರಸರ ಪ್ರತಿಕೃತಿಗಳು, ಇಸ್ರೋ ಸಾಧನೆ ಸಾರುವ ರಾಕೆಟ್ ಕಲಾಕೃತಿಗಳು ವಿವಿಧ ಬಗೆಯ ಹೂಗಳಿಂದ ನಿರ್ಮಾಣ ಗೊಂಡಿರುವ ಕಲಾಪ್ರದರ್ಶನಗಳು ನೋಡುಗರ ಕಣ್ಮನ ಸೆಳೆಯುತ್ತಿದೆ.
ದಸರಾ ಹಬ್ಬದಂತೆ ಪ್ರವಾಸಿಗರನ್ನು ಆಕರ್ಷಿಸಲು 3 ವರ್ಷಗಳಿಂದ ಈ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗುತ್ತಿದ್ದು, ಈ ಸಲವೂ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನ ಮಾಗಿ ಉತ್ಸವ ಹಮ್ಮಿಕೊಳ್ಳಲಾಗಿದೆ.
24 ಸಾವಿರ ವಿವಿಧ ಬಗೆಯ ಹೂವಿನ ಗಿಡವುಳ್ಳ ಹೂವಿನ ಕುಂಡ ಬಳಸಲಾಗಿದ್ದು, ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಕಾಕ್ಸಕೂಂಬ್, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಲೋಷಿಯ ಸೇರಿ 32 ಬಗೆಯ ಹೂವಿನ ಗಿಡಗಳು ಮೇಳೈಸಿವೆ. ಇವುಗಳೊಂದಿಗೆ 4 ಲಕ್ಷ ವಿವಿಧ ಹೂವುಗಳಾದ ಗುಲಾಬಿಗಳು, ಕ್ರೈಸಾಂಥಿಮಮ್, ಪಿಂಗ್ಪಾಂಗ್, ಕಾರ್ನೆಷನ್ ಮತ್ತು ಇತರ ಅಲಂಕಾರಿಕ ಹೂವು, ಊಟಿ ಕಟ್ ಫ್ಲವರ್ಗಳ ಅಲಂಕಾರ ಕೂಡ ವೀಕ್ಷಣೆಗೆ ಲಭ್ಯವಿದೆ.
ವಿವಿಧ ಬಣ್ಣಗಳ ಲಕ್ಷಕ್ಕೂ ಅಧಿಕ ಗುಲಾಬಿ ಹೂವಿನಿಂದ ಈ ಆಕೃತಿಯನ್ನು ನಿರ್ಮಿಸಲಾಗಿದ್ದು, ಪ್ರವೇಶ ದ್ವಾರದಲ್ಲಿ ಸೊಂಡಿಲೆತ್ತಿ ನಮಸ್ಕರಿಸುತ್ತಿರುವ 2 ಆನೆಗಳ ಮಾದರಿ, ವಾಯುಸೇನಾ, ಭೂಸೇನಾ ಹಾಗೂ ನೌಕಾಸೇನೆ ಗೌರವ ಸಲ್ಲಿಸುವ ಮಾದರಿ ಚಿತ್ರಗಳನ್ನು ಪಿಂಗ್ ಪಾಂಗ್ ಹೂವುಗಳಿಂದ ಅಲಂಕರಿಸಲಾಗಿದೆ.
ಕಾಳಿಂಗ ಸರ್ಪ, ಧ್ಯಾನದ ಭಂಗಿಯಲ್ಲಿ ಕುಳಿತಿರುವ ಸ್ವಾಮಿ ವಿವೇಕಾನಂದರನ್ನು ಹೂವು ಮತ್ತು ತರಕಾರಿಗಳಿಂದ ಸಿಂಗಾರ ಮಾಡಲಾಗಿದೆ. ಜಯಚಾಮರಾಜ ಒಡೆಯರ್ ಅವರು ಸಿಂಹಾಸನದ ಮೇಲೆ ಕುಳಿತಿರುವಂತೆ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯವರ ಆಕೃತಿಯನ್ನು ಕೂಡ ರಚಿಸಲಾಗಿದೆ. ಅರಮನೆ ಖಾಸಗಿ ದರ್ಬಾರ್ ನ ಆಕೃತಿಯುಳ್ಳ ಸೆಲ್ಫಿ ವಲಯವೂ ಇಲ್ಲಿದೆ.
ರಾಷ್ಟ್ರಪಕ್ಷಿ ನವಿಲು ಮಾದರಿ, ಮನೆಯ ಅಂಗಳದ ರೀತಿಯ ಫೋಟೋ, ಶಿವಲಿಂಗ ಮಾದರಿ ಚಿತ್ರವನ್ನು ನಿರ್ಮಿಸಿ ನಿಂಬೆಹಣ್ಣು ಮತ್ತು ಬಿಲ್ವ ಪತ್ರೆಗಳಿಂದ ಅಲಂಕರಿಸಲಾಗುತ್ತಿದೆ. ಚಾರಿಯೆಟ್ ಗಾಡಿಯ ಮಾದರಿ, ಒಂದು ಕುದುರೆ ಆಕೃತಿ, ಮಕ್ಕಳ ಉದ್ಯಾನದಲ್ಲಿ ಮರಳುಗಾಡಿನಲ್ಲಿ ವಾಸಿಸುವ ಪ್ರಾಣಿಗಳು ಮತ್ತು ಪಕ್ಷಿಗಳ 5 ಚಿತ್ರಗಳು ಚಿಣ್ಣರನ್ನು ಬರಮಾಡಿಕೊಳ್ಳಲಿವೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಅರಮನೆ ಆವರಣದಲ್ಲಿ ಡಿ.28ರಿಂದ 30ರವರೆಗೆ ನಿತ್ಯ ಸಂಜೆ 7ರಿಂದ ರಾತ್ರಿ 9ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಡಿ. 31ರಂದು ರಾತ್ರಿ 11ರಿಂದ 12ರವರೆಗೆ ಪೊಲೀಸ್ ವಾದ್ಯ ತಂಡದಿಂದ ಕರ್ನಾಟಕ ಮತ್ತು ಆಂಗ್ಲ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ. ಹೊಸ ವರ್ಷಾಚರಣೆ ಪ್ರಯುಕ್ತ ರಾತ್ರಿ 12ರಿಂದ 12.15ರವರೆಗೆ ಶಬ್ದ ರಹಿತ ಪಟಾಕಿಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಲಿವೆ.
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗ್ನಾಥ್, ಉಪಮೇಯರ್ ಶಫೀ ಅಹಮದ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಅರಮನೆ ಮಂಡಳಿ ನಿರ್ದೇಶಕ ಸುಬ್ರಮಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.