ಗಲಭೆ ಎಬ್ಬಿಸಿ ಸರಕಾರ ಉರುಳಿಸುವುದು ಕಾಂಗ್ರೆಸ್ ಸಂಸ್ಕೃತಿ: ಸಚಿವ ಸಿ.ಟಿ.ರವಿ

Update: 2019-12-24 18:23 GMT

ಚಿಕ್ಕಮಗಳೂರು, ಡಿ.24: ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆಯಲು ಕಾಂಗ್ರೆಸ್ ಕಾರಣವಾಗಿದೆ. ಗಲಭೆಗಳನ್ನು ಹುಟ್ಟುಹಾಕಿ ಸರಕಾರಗಳನ್ನು ಬೀಳಿಸುವುದು ಕಾಂಗ್ರೆಸ್‍ನವರಿಗೆ ಕರಗತವಾದ ವಿಧ್ಯೆಯಾಗಿದೆ. ಅಧಿಕಾರಕ್ಕಾಗಿ ಗಲಭೆಗಳನ್ನು ಸೃಷ್ಟಿಸುವುದು ಕಾಂಗ್ರೆಸ್‍ನ ಸಂಸ್ಕೃತಿ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಆರೋಪಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಲಭೆ ಸೃಷ್ಟಿಸಿ ಸರಕಾರಗಳನ್ನು ಬೀಳಿಸುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ಈ ಹಿಂದೆ ಬಂಗಾರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ವೀರೇಂದ್ರ ಪಾಟೀಲರು ತಮ್ಮ ಪಕ್ಷದಲ್ಲೇ ಗಲಭೆ ಎಬ್ಬಿಸಿ ಬಂಗಾರಪ್ಪ ಅವರನ್ನು ಪದಚ್ಯುತಿಗೊಳಿಸಿದ್ದರು ಎಂದ ಸಚಿವ ಸಿ.ಟಿ.ರವಿ, ಮಂಗಳೂರು ಗಲಭೆ ಮೂಲಕ ಮತ್ತೊಮ್ಮೆ ಅಂತಹ ಪ್ರಯತ್ನವನ್ನು ಕಾಂಗ್ರೆಸಿಗರು ನಡೆಸಿದ್ದಾರೆ. ಗಲಭೆ ಉದ್ದೇಶಪೂರ್ವಕವಾದದ್ದು ಎನ್ನುವುದು ಸಿಸಿ ಟಿವಿ ದೃಶ್ಯವಳಿಗಳಲ್ಲಿ ಬಯಲಾಗಿದೆ. ಕಲ್ಲುಗಳು, ಪೆಟ್ರೋಲ್ ಬಾಂಬ್‍ಗಳನ್ನು ತಂದು ಜನರು ಮತ್ತು ಪೊಲೀಸರನ್ನು ಗುರಿಯಾಗಿಸಿ ಎಸೆದಿರುವುದು ವಿಡಿಯೋಗಳಲ್ಲಿ ದಾಖಲಾಗಿದೆ. ಈ ಸಂಬಂಧ ತನಿಖೆಯಾಗಬೇಕು. ಘಟನೆಯ ಹಿಂದೆ ಯಾವುದೇ ಪಕ್ಷ, ಸಂಘಟನೆಗಳ ಕೈವಾಡ ಇದ್ದರೂ ಕಠಿಣ ಕಾನೂನು ಕ್ರಮ ಜರಗಿಸಬೇಕು ಎಂದರು..

ಸೋಮವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಶೇ.10ರಷ್ಟು ಜನರು ಮಾತ್ರ ಸೇರಿದ್ದಾರೆ. ಉಳಿದವರೂ ಬಂದಿದ್ದರೆ ಪರಿಸ್ಥಿತಿ ಏನಿರುತ್ತಿತ್ತು ಎಂದು ಕೆಲವರು ಮಾತನಾಡಿದ್ದಾರೆ. ಕಾಶ್ಮೀರದಲ್ಲಿ ಇಂದಿಗೂ ಹಿಂದುಗಳು ತಮ್ಮ ಮನೆಗಳಿಗೆ ಹೋಗಲು ಆಗುತ್ತಿಲ್ಲ. ದೇಶದೆಲ್ಲೆಡೆ ಅಂತಹ ಸ್ಥಿತಿ ನಿರ್ಮಾಣ ಆಗಬಾರದು ಎನ್ನುವ ಕಾರಣಕ್ಕೆ ಶೇ.90ರಷ್ಟು ನಾವಿದ್ದರೂ ಸರ್ವೇಜನೋ ಸುಖಿನೋ ಭವಂತು ಎನ್ನುವುದು ನಮ್ಮ ಧ್ಯೇಯವೂ ಆಗಿರುವುದರಿಂದ ಆ ರೀತಿ ಆಗಿಲ್ಲ ಎಂದರು.

ಮಂಗಳೂರು ಗಲಭೆಗೆ ಸಂಬಂಧಿಸಿದ ಸಿಸಿ ಟಿವಿ ಫೂಟೇಜ್‍ಗಳನ್ನು ನಂಬಲಿಕ್ಕಾಗುವುದಿಲ್ಲ. ಅದರಲ್ಲಿರುವವರು ಬಿಜೆಪಿಯವರೇ ಇರಬಹುದು ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ.ರವಿ, ತಾಯಿಯ ಬಗ್ಗೆ, ಸೈನ್ಯದ ಬಗ್ಗೆ ಅನುಮಾನವಿರುವವರು ಮಾತ್ರ ಈ ರೀತಿ ಹೇಳಲು ಸಾಧ್ಯ ಎಂದು ಪ್ರತಿಕ್ರಿಯಿಸಿದರು.

ಹಿಂದೆ ಬಿಜೆಪಿ ಗೆದ್ದಾಗಲೆಲ್ಲ ಇವಿಎಂನ್ನು ಕಾಂಗ್ರೆಸಿಗರು ಪ್ರಶ್ನಿಸುತ್ತಿದ್ದರು. ನಾವು ಜಾರ್ಖಂಡ್‍ನಲ್ಲಿ ಸೋತರೂ ಜನಾದೇಶ ಎಂದು ಒಪ್ಪಿಕೊಂಡಿದ್ದೇವೆ. ಕಾಂಗ್ರೆಸ್ ಮೈತ್ರಿಕೂಟ ಸೋತಿದ್ದರೆ ಅದಕ್ಕೆ ಇವಿಎಂ ಕಾರಣ ಎನ್ನುತ್ತಿದ್ದರು. ಕೆಲವರು ತಾಯಿಯ ಬಗ್ಗೆಯೂ ಅನುಮಾನಿಸುತ್ತಾರೆ. ಕಾಂಗ್ರೆಸ್ ಆ ಸ್ಥಿತಿಗೆ ಹೋಗಿರಬಹುದು ಎಂದು ಇದೇ ವೇಳೆ ರವಿ ಹೇಳಿದರು.

ಯು.ಟಿ.ಖಾದರ್ ಬೆಂಕಿ ಹಚ್ಚುವ ಪ್ರಚೋದನಾಕಾರಿ ಹೇಳಿಕೆ ನೀಡಿದ ನಂತರವೇ ಗಲಭೆ ನಡೆದಿದೆ. ಆದರೂ ಕಾಂಗ್ರೆಸ್‍ನ ಯಾವೊಬ್ಬ ನಾಯಕನೂ ಕ್ಷಮೆ ಕೇಳುವಂತೆ ಯು.ಟಿ.ಖಾದರ್ ಗೆ ಒತ್ತಾಯಿಸಿಲ್ಲ. ಅವರ ಹೇಳಿಕೆಯನ್ನು ಖಂಡಿಸಲೂ ಇಲ್ಲ, ಇದು ಗಲಭೆ ಹಿಂದೆ ಕಾಂಗ್ರೆಸ್ ಕೈವಾಡ ಇರುವುದನ್ನು ತೋರಿಸುತ್ತದೆ. 

- ಸಿ.ಟಿ.ರವಿ, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News