ಜಾರ್ಖಂಡ್: ಬಿಜೆಪಿಗೆ ಮುಖಭಂಗ

Update: 2019-12-25 05:37 GMT

ಕರಾಳ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದಲ್ಲಿ ಜನ ಸಾಮಾನ್ಯರು ಹೋರಾಟಕ್ಕಿಳಿದಾಗಲೇ ನಡೆದ ಜಾರ್ಖಂಡ್ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ತೀವ್ರ ಮುಖಭಂಗ ಅನುಭವಿಸಿದೆ. ರಾಜ್ಯದ ಒಟ್ಟು 81 ವಿಧಾನ ಸಭಾ ಕ್ಷೇತ್ರಗಳ ಪೈಕಿ ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್ ಮೈತ್ರಿ ಕೂಟ 47 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಲು ಸಜ್ಜಾಗಿ ನಿಂತಿದೆ.ಕಳೆದ ಐದು ವರ್ಷಗಳ ಕಾಲ ಈ ರಾಜ್ಯವನ್ನಾಳಿದ ಬಿಜೆಪಿ ಕೇವಲ 25 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಉಳಿದ ಸ್ಥಾನಗಳನ್ನು ಇತರ ಪಕ್ಷಗಳು ಮತ್ತು ಪಕ್ಷೇತರರು ಹಂಚಿಕೊಂಡಿದ್ದಾರೆ.

ಜಾರ್ಖಂಡ್‌ನ ಈ ಸೋಲು ಬಿಜೆಪಿಗೆ ಚೇತರಿಸಲಾಗದ ಪೆಟ್ಟು ನೀಡಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಒಟ್ಟು ಐದು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ತಮ್ಮ ಸೋಲಿನ ಕಾರಣ ಹುಡುಕಲು ತಡಕಾಡುತ್ತಿವೆ. 2017ರಲ್ಲಿ ದೇಶದ ಶೇ. 71ರಷ್ಟು ಭಾಗ ಬಿಜೆಪಿ ಕೂಟದ ವಶದಲ್ಲಿತ್ತು. ಜಾರ್ಖಂಡ್ ಚುನಾವಣೆ ನಂತರ ಅದೀಗ ಶೇಕಡಾ 35 ಕ್ಕೆ ಕುಸಿದಿದೆ. ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸ್‌ಗಡ, ಮಧ್ಯಪ್ರದೇಶ ವಿಧಾನ ಸಭಾ ಚುನಾವಣೆಯ ಸೋಲಿನ ಏಟಿನಿಂದ ಚೇತರಿಸುವ ಮುನ್ನವೇ ಜಾರ್ಖಂಡ್ ಮತದಾರರು ಬಿಜೆಪಿಗೆ ಮುಟ್ಟಿ ನೋಡಿಕೊಳ್ಳುವಂಥ ಹೊಡೆತವನ್ನು ನೀಡಿದ್ದಾರೆ. ಜಾರ್ಖಂಡ್‌ನಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪರಾಭವ ಅನುಭವಿಸಿದೆ.

ಜಾರ್ಖಂಡ್ ವಿಧಾನ ಸಭಾ ಚುನಾವಣೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಅಂತಲೇ ಮೋದಿಯವರು ವಾರಗಟ್ಟಲೆ ಅಲ್ಲಿ ಸಂಚರಿಸಿ ಪ್ರಚಾರ ಮಾಡಿದರು ಆದರೂ ಜನರ ಮನಸ್ಸು ಗೆಲ್ಲುವಲ್ಲಿ ಸೋತರು. ಈ ಸೋಲಿಗೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಕಳೆದ ಐದು ವರ್ಷಗಳ ಬಿಜೆಪಿ ಸರಕಾರ ರಾಜ್ಯದಲ್ಲಿ ಉತ್ತಮ ಆಡಳಿತವನ್ನೇನೂ ನೀಡಿರಲಿಲ್ಲ.

ಎರಡು ದಶಕಗಳ ಹಿಂದೆ ಬಿಹಾರದಿಂದ ಪ್ರತ್ಯೇಕಗೊಂಡು ಅಸ್ತಿತ್ವಕ್ಕೆ ಬಂದ ಜಾರ್ಖಂಡ್ ಶೇಕಡಾ 29ರಷ್ಟು ಬುಡಕಟ್ಟು ಸಮುದಾಯದ ಜನ ವಾಸಿಸುವ ಪ್ರದೇಶ. ಈ ರಾಜ್ಯ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಿಜೆಪಿ ಪ್ರಾಬಲ್ಯ ಸಾಧಿಸುತ್ತಾ ಬಂದಿದೆ. ಆದರೆ ಈ ಬಾರಿ ಅದು ಸೋಲಲು ಕಾರಣ ಬುಡಕಟ್ಟು ಜನ ಒಂದಾಗಿ ತಿರುಗಿ ಬಿದ್ದದ್ದು. ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ಬಿಜೆಪಿ ನಾಯಕ ರಘುಬರದಾಸ ಮುಖ್ಯಮಂತ್ರಿಯಾದ ನಂತರ ಬುಡಕಟ್ಟು ಸಮುದಾಯದ ಪರವಾಗಿದ್ದ ಸಂತಾಲ ಮತ್ತು ಛೋಟಾ ನಾಗಪುರ ಕಾನೂನುಗಳಿಗೆ ತಿದ್ದುಪಡಿ ತಂದು ಆದಿವಾಸಿಗಳಿಗೆ ಸೇರಿದ ಭೂಮಿಯನ್ನು ಕಾರ್ಪೊರೇಟ್ ಕಂಪೆನಿಗಳ ಒಡಲಿಗೆ ಹಾಕಲು ಮುಂದಾದರು. ಬುಡಕಟ್ಟು ಜನಾಂಗಕ್ಕೆ ಸೇರಿದ ಭೂಮಿಯನ್ನು ಬುಡಕಟ್ಟೇತರ ಜನರು ಖರೀದಿಸಲು ನಿರ್ಬಂಧ ವಿಧಿಸಿದ್ದ ಕಾನೂನಿಗೆ ತಿದ್ದುಪಡಿ ತಂದು ತಮ್ಮ ಜಮೀನನ್ನು ಕಿತ್ತುಕೊಂಡ ನಂತರ ಆದಿವಾಸಿಗಳು ಬಿಜೆಪಿ ವಿರುದ್ಧ ತಿರುಗಿ ಬಿದ್ದರು. ಈ ರಾಜ್ಯದಲ್ಲಿ ಸಂಘಪರಿವಾರದ ಸಂಘಟನೆಗಳ ಪುಂಡಾಟಿಕೆ ಎಷ್ಟು ಮಿತಿ ಮೀರಿತ್ತೆಂದರೆ ಬುಡಕಟ್ಟು ಜನರ ಭೂಮಿಯ ಹಕ್ಕಿಗಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಭಾಗವಹಿಸಲು ಜಾರ್ಖಂಡ್‌ಗೆ ಬಂದಿದ್ದ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಹಲ್ಲೆ ಮಾಡಿ ನಡು ರಸ್ತೆಯಲ್ಲಿ ಉರುಳಾಡಿಸಿ ಹೊಡೆದರು.

ಈ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇನೋ ರಾಜ್ಯದಲ್ಲಿ ತೀವ್ರ ಚುನಾವಣೆ ಪ್ರಚಾರ ನಡೆಸಿದರು. ಆದರೆ ಅವರು ಭಾಷಣಗಳಲ್ಲಿ ಸ್ಥಳೀಯ ಜನರ ಸಮಸ್ಯೆ ಸಂಕಟಗಳ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ಪ್ರತಿ ಭಾಷಣದಲ್ಲಿ ಮೋದಿಯವರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ವಿಧಿ ರದ್ದತಿ, ಪೌರತ್ವ ಕಾಯ್ದೆಗೆ ತಂದ ತಿದ್ದುಪಡಿ ಇಂತಹ ರಾಜ್ಯಕ್ಕೆ ಸಂಬಂಧಪಡದ ವಿಷಯ ಗಳ ಬಗ್ಗೆ ಮಾತ್ರ ಮಾತಾಡಿದರು. ಆದರೆ ರಾಜ್ಯದಲ್ಲಿ ಏಳು ನೂರಕ್ಕೂ ಹೆಚ್ಚು ಸಣ್ಣ ಪುಟ್ಟ ಉದ್ದಿಮೆಗಳು ಮುಚ್ಚಿ ಸಾವಿರಾರು ಜನ ಬೀದಿ ಪಾಲಾಗಿದ್ದಾರೆ. ನಿರುದ್ಯೋಗ ಸಮಸ್ಯೆ ಉಲ್ಬಣಿಸಿದೆ. ಈ ಸಮಸ್ಯೆಗೆ ಬಿಜೆಪಿ ಸರಕಾರ ಸ್ಪಂದಿಸಲಿಲ್ಲ. ಪ್ರಧಾನಿಯಾಗಲಿ, ಅಮಿತ್ ಶಾ ಆಗಲಿ ಈ ಬಗ್ಗೆ ಮಾತಾಡದೆ ಬರೀ ಕೋಮು ಪ್ರಚೋದಕ ಭಾಷಣ ಮಾಡಿ ಹೋದರು. ಇದು ಬಿಜೆಪಿ ಸೋಲಿಗೆ ಇನ್ನೊಂದು ಕಾರಣ.

ಎರಡನೆಯದಾಗಿ ಬಿಜೆಪಿಯಲ್ಲಿ ಆಂತರಿಕವಾಗಿ ಬುಡಕಟ್ಟು ಸಮುದಾಯದಿಂದ ಬಂದ ನಾಯಕರನ್ನು ಮೂಲೆಗುಂಪು ಮಾಡಲಾಯಿತು. ಛತ್ತೀಸ್‌ಗಡ ಮೂಲದ ಆದಿವಾಸಿಯಲ್ಲದ ರಘುಬರದಾಸರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಹೇರಲಾಯಿತು. ಆರೆಸ್ಸೆಸ್ ಪ್ರಚಾರಕನಾಗಿದ್ದ ಇವರು ಬುಡಕಟ್ಟು ಜನರ ಭೂಮಿ ಕಿತ್ತುಕೊಂಡು ಕಾರ್ಪೊರೇಟ್ ಕಂಪೆನಿಗಳಿಗೆ ನೀಡಲು ಮುಂದಾದಾಗ ಜನ ಸಹಜವಾಗಿ ರೊಚ್ಚಿಗೆದ್ದರು.

ಇದರ ಜೊತೆಗೆ ರಾಜ್ಯದ ಹಲವಾರು ಸಚಿವರ ಮೇಲೆ ಭ್ರಷ್ಟಾಚಾರದ ಆರೋಪಗಳು ಬಂದವು. ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳದ ರಘುಬರದಾಸ ಈ ಬಗ್ಗೆ ಪ್ರಶ್ನಿಸಿದರೆ ಅತ್ಯಂತ ಉದ್ಧ್ದಟತನದಿಂದ ವರ್ತಿಸಿದರು. ಸ್ವತಃ ಅವರ ಸಂಬಂಧಿಕರ ಮೇಲೆ ಹಲವಾರು ಆರೋಪಗಳು ಬಂದವು.

ಇದೆಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿದ ಕಾಂಗ್ರೆಸ್ ಸ್ಥಳೀಯ ಬುಡಕಟ್ಟು ಜನರ ಪಕ್ಷವಾದ ಜಾರ್ಖಂಡ್ ಮುಕ್ತಿ ಮೋರ್ಚಾ ಹಾಗೂ ಲಾಲು ಪ್ರಸಾದ್ ಯಾದವ್‌ರ ಆರ್‌ಜೆಡಿ ಪಕ್ಷಗಳ ಜೊತೆಗೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡು ಗೆಲುವಿನ ಬಾವುಟವನ್ನು ಹಾರಿಸಿತು. ಈ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸದಿದ್ದರೂ ಅದರ ಪ್ರಾಬಲ್ಯ ಕಡಿಮೆಯಾಗಿಲ್ಲ. ಪ್ರತಿಶತ ವೋಟುಗಳ ಪ್ರಮಾಣ ಶೇಕಡಾ 3ರಷ್ಟು ಹೆಚ್ಚಳವಾಗಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ ಹಾಗೂ ಕಾಂಗ್ರೆಸ್ ಮೈತ್ರಿ ಕೂಟದ ಸರಕಾರ ಮುಂದಿನ ಐದು ವರ್ಷಗಳ ಕಾಲ ಉತ್ತಮ ಮತ್ತು ಪಾರದರ್ಶಕ ಆಡಳಿತ ನೀಡದೇ ಹೋದಲ್ಲಿ ಬಿಜೆಪಿಗೆ ಆದ ಗತಿಯೇ ಈ ಮೈತ್ರಿ ಸರಕಾರಕ್ಕೂ ಬರಬಹುದು.

ಒಟ್ಟಿನಲ್ಲಿ, ಭಾರತದ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ರಾಜಕೀಯ ಲಾಭ ಮಾಡಿಕೊಳ್ಳುವ ಕೋಮುವಾದಿ ಹುನ್ನಾರಗಳು ಬಹಳ ಕಾಲ ನಡೆಯುವುದಿಲ್ಲ ಎಂಬುದು ಜಾರ್ಖಂಡ್ ಸೇರಿದಂತೆ ಇತ್ತೀಚಿನ ವಿಧಾನ ಸಭಾ ಚುನಾವಣಾ ಫಲಿತಾಂಶಗಳಿಂದ ಸ್ಪಷ್ಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News