×
Ad

ಮಹಾದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ: ವಿ.ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್

Update: 2019-12-25 19:36 IST

ಬಾಗಲಕೋಟೆ, ಡಿ.25: ಮಹದಾಯಿ ವಿಚಾರದಲ್ಲಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಗೋವಾ ಸರಕಾರದ ಮಾತು ಕೇಳಿ ಕುಡಿಯುವ ನೀರಿನ ಈ ಯೋಜನೆಗೆ ಕೇಂದ್ರ ತಡೆಯಾಜ್ಞೆ ನೀಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ನೀತಿ ಮತ್ತಷ್ಟು ನಿರಾಸೆ ಮೂಡಿಸಿದೆ. ತಮ್ಮದೇ ಪಕ್ಷದ ಕೇಂದ್ರ ಸರಕಾರದ ಎದುರು ಈ ಬಗ್ಗೆ ಮಾತನಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರಕ್ಕೆ ಧೈರ್ಯವಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹಾದಾಯಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿಸುವುದಾಗಿ ಯಡಿಯೂರಪ್ಪ ಹೇಳಿದ್ದರು. ಆದರೆ, ಈಗ 24 ಗಂಟೆಯನ್ನು ಬಹುಷಃ 24 ವರ್ಷ ಅಥವಾ ಶತಮಾನ ಎಂದು ತಿಳಿದುಕೊಂಡಿರಬಹುದೇನೋ ಎಂದು ಎಸ್.ಆರ್.ಪಾಟೀಲ್ ಕಿಡಿಕಾರಿದರು.

ರಾಜ್ಯದ ಬಿಜೆಪಿ ನಾಯಕರಿಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಮಹಾದಾಯಿ ಯೋಜನೆಗೆ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಸಾಧ್ಯವಾಗಲಿಲ್ಲ. ದೀಪ ಆರುವ ಮುನ್ನ ಹೆಚ್ಚು ಉರಿಯುತ್ತೆ, ಅದೇ ರೀತಿ ಹೆಚ್ಚು ಉರಿಯುತ್ತಿದ್ದ ಬಿಜೆಪಿ ದೀಪ ಶೀಘ್ರದಲ್ಲೆ ಆರಿ ಹೋಗಲಿದೆ ಎಂದು ಅವರು ಹೇಳಿದರು.

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ ಮೇಲೆ ಜಾರ್ಖಂಡ್ ವಿಧಾನಸಭಾ ಕ್ಷೇತ್ರದ ಚುನಾವಣೆ ಮೊದಲ ಪರೀಕ್ಷೆಯಾಗಿತ್ತು. ಅಲ್ಲಿ ಆಡಳಿತದಲ್ಲಿ ಬಿಜೆಪಿ ಸರಕಾರ ಇತ್ತಾದರೂ, ಈಗ ಅಧಿಕಾರ ಕಳೆದುಕೊಂಡಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಸೋಲು ಅನುಭವಿಸಲಿದೆ ಎಂದು ಎಸ್.ಆರ್.ಪಾಟೀಲ್ ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಚಾಣಕ್ಯ ಎಂದು ಕರೆಸಿಕೊಳ್ಳುವ ಅಮಿತ್ ಶಾ, ಕಳೆದ 12 ತಿಂಗಳಲ್ಲಿ ಐದು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಬಿಜೆಪಿಯ ಚಾಣಕ್ಯನ ಪರಿಸ್ಥಿತಿ ನೋಡಿದರೆ ಮರುಕ ಉಂಟಾಗುತ್ತಿದೆ. ಒಬ್ಬ ವ್ಯಕ್ತಿ ಕೆಲ ಕಾಲದವರೆಗೆ ಎಲ್ಲರನ್ನೂ ಮೋಸ ಮಾಡಬಹುದು. ಆದರೆ, ಎಲ್ಲ ಸಂದರ್ಭಗಳಲ್ಲೂ ಎಲ್ಲರನ್ನೂ ಮೋಸ ಮಾಡಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹಾಗೂ ಮೋದಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿರುವುದರಿಂದ ಕಾಂಗ್ರೆಸ್ಸಿಗರನ್ನು ದೇಶದ್ರೋಹಿಗಳೆಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ದೇಶದ ಸ್ವಾತಂತ್ರಕ್ಕಾಗಿ ಕಾಂಗ್ರೆಸ್ ಪಕ್ಷದ ಆರೂವರೆ ಲಕ್ಷ ಜನ ಪ್ರಾಣ ತೆತ್ತಿದ್ದಾರೆ. ಕಾರಜೋಳ ತಮ್ಮ ಪಕ್ಷದ ಇತಿಹಾಸ ಏನು ಎಂಬುದನ್ನು ನೋಡಿಕೊಂಡು ನಮ್ಮ ಬಗ್ಗೆ ಮಾತನಾಡಲಿ. ಈ ಕೂಡಲೇ ಅವರು ಕಾಂಗ್ರೆಸ್ ಪಕ್ಷದ ಕ್ಷಮೆ ಕೋರಬೇಕು ಎಂದು ಎಸ್.ಆರ್.ಪಾಟೀಲ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News