×
Ad

ನ್ಯಾಯಾಂಗ, ಸಿಐಡಿ ತನಿಖೆ ಗೊಂದಲ: ಸುಪ್ರೀಂ ಕೋರ್ಟ್ ಮಾರ್ಗಸೂಚಿ ಏನು ?

Update: 2019-12-25 20:09 IST
ಫೈಲ್ ಚಿತ್ರ

ಬೆಂಗಳೂರು, ಡಿ. 25: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಘಟನೆ ಕುರಿತ ನ್ಯಾಯಾಂಗ ಮತ್ತು ಸಿಐಡಿ ತನಿಖೆ ಗೊಂದಲ ಸೃಷ್ಟಿಯಾಗಿದೆ. ಅಲ್ಲದೆ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸಿಎಂ ಹಾಗೂ ಗೃಹ ಸಚಿವರ ಹೇಳಿಕೆಗಳೂ ಹಲವು ಗೊಂದಲಕ್ಕೆ ಕಾರಣವಾಗಿವೆ.

ಆದರೆ, ಗೋಲಿಬಾರ್ ಮತ್ತು ಎನ್‌ಕೌಂಟರ್ ಪ್ರಕರಣಗಳ ಸಂದರ್ಭದಲ್ಲಿ ಏನೇನು ಕ್ರಮಗಳನ್ನು ಅನುಸರಿಸಬೇಕೆಂದು ಸುಪ್ರಿಂ ಕೋರ್ಟ್ ಮಾರ್ಗಸೂಚಿ ಇದೆ. ‘ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಕೋರ್ಟ್ ಸೂಚಿಸಿರುವ ಕ್ರಮಗಳನ್ನು ಅನುಸರಿಸುತ್ತಿಲ್ಲ’ ಎಂದು ಮಾನವ ಹಕ್ಕುಗಳ ಹೋರಾಟಗಾರರು ದೂರಿದ್ದಾರೆ.

‘ಯಾವುದೇ ಗೋಲಿಬಾರ್ ಮತ್ತು ಎನ್‌ಕೌಂಟರ್ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ಕಡ್ಡಾಯ, ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಘಟನೆ ಬಗ್ಗೆ ಮಾಹಿತಿ ನೀಡಬೇಕು. ಗೋಲಿಬಾರ್-ಎನ್‌ಕೌಂಟರ್ ನಡೆಸಿದ ಅಧಿಕಾರಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸಬೇಕು. ಸಂತ್ರಸ್ತರ ಕುಟುಂಬದ ಸದಸ್ಯರು ಸುಪ್ರೀಂ ಕೋರ್ಟ್ ನಿಯಮ ಪಾಲಿಸಿಲ್ಲ ಎನ್ನಿಸಿದರೆ ಅವರು ಮ್ಯಾಜಿಸ್ಟ್ರೇಟರಿಗೆ ದೂರು ನೀಡಬಹುದು. ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಸಾಬೀತಾದರೆ ಕೂಡಲೇ ಅವರನ್ನು ಕರ್ತವ್ಯದಿಂದ ಅಮಾನತು ಮಾಡಬೇಕು. ಅಲ್ಲದೆ, ಸಿಆರ್‌ಪಿಸಿ ಕಲಂ ಅನ್ವಯ ಮೃತರ ಕುಟುಂಬಕ್ಕೆ ಪರಿಹಾರ ನೀಡುವುದು’ ಸೇರಿದಂತೆ ಒಟ್ಟು 16 ಮಾರ್ಗಸೂಚಿಯನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ.

ಆದರೆ, ಮಂಗಳೂರು ಗೋಲಿಬಾರ್ ಘಟನೆಯಲ್ಲಿ ಮೃತಪಟ್ಟ ನೌಶೀನ್ ಮತ್ತು ಜಲೀಲ್ ಆರೋಪಿಗಳು ಎಂದು ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೆ, ‘ತನಿಖಾ ವರದಿ ಬರುವವರೆಗೂ ಪರಿಹಾರದ ಹಣವನ್ನು ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

‘ಮಂಗಳೂರು ಗಲಭೆಗೆ ಪೊಲೀಸರ ಗುಂಡೇಟಿನಿಂದ ಸತ್ತವರೇ ಕಾರಣ ಎಂದು ತನಿಖೆಗೆ ಮೊದಲೇ ರಾಜ್ಯ ಸರಕಾರದ ಪ್ರತಿನಿಧಿಗಳು ತೀರ್ಪು ನೀಡುವುದು ಸರಿಯಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಕ್ಷೇಪಿಸಿದ್ದಾರೆ.

‘ಗೋಲಿಬಾರ್ ಮತ್ತು ಎನ್‌ಕೌಂಟರ್ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ಕಾನೂನು ಮತ್ತು ಮಾರ್ಗಸೂಚಿಗಳನ್ನು ಪಾಲಿಸಿದ ಉದಾಹರಣೆ ವಿರಳ. ಅವರು ಯಾವುದೇ ಕೃತ್ಯ ನಡೆಸಿದರೂ ಯಾರೂ ಏನೂ ಮಾಡಲು ಸಾಧ್ಯವಿಲ್ಲ, ಅವರಿಗೆ ಹೇಳುವವರೂ, ಕೇಳುವವರೂ ಯಾರೂ ಇಲ್ಲ ಎಂಬ ಮನೋಭಾವ ಬಂದಿದೆ’ ಎಂದು ಪ್ರಜಾತಾಂತ್ರಿಕ ಜನರ ವೇದಿಕೆ(ಪಿಡಿಎಫ್) ಶ್ರೀರಾಮ್ ಆರೋಪಿಸಿದ್ದಾರೆ.

‘ಲಾಠಿ ಪ್ರಹಾರ, ಜಲಪಿರಂಗಿ, ಅಶ್ರುವಾಯು, ಗಾಳಿಯಲ್ಲಿ ಗುಂಡು ಹಾರಿಸಬೇಕು. ಅಲ್ಲಿಗೂ ಗಲಭೆ ನಿಯಂತ್ರಣಕ್ಕೆ ಬಾರದಿದ್ದರೆ ಗೋಲಿಬಾರ್ ನಡೆಸಬೇಕು. ಅದಕ್ಕೂ ಕೆಲ ಮಾರ್ಗಸೂಚಿಗಳಿವೆ. ಆದರೆ, ಮಂಗಳೂರು ಪ್ರಕರಣದಲ್ಲಿ ಗೋಲಿಬಾರ್ ನಿಯಮಗಳನ್ನು ಪಾಲಿಸಿಲ್ಲ ಎಂಬುದು ಸ್ಪಷ್ಟ. ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸರ ತನಿಖೆ ನಿಷ್ಪಕ್ಷಪಾತವಾಗಿರಲು ಸಾಧ್ಯವೇ?’ ಎಂದು ಶ್ರೀರಾಮ್ ಪ್ರಶ್ನಿಸಿದ್ದಾರೆ.

ತನಿಖೆಗೆ ಮೊದಲೇ ತೀರ್ಪು

‘ಮಂಗಳೂರು ಗಲಭೆಗೆ ಗುಂಡೇಟಿನಿಂದ ಸತ್ತವರೇ ಕಾರಣ ಎಂದು ತೀರ್ಪು ನೀಡಿರುವ ಸಿಎಂ ಯಡಿಯೂರಪ್ಪನವರೇ, ಸಿಐಡಿ ತನಿಖೆಯ ನಾಟಕ ಯಾಕೆ? ಅದನ್ನು ನಿಲ್ಲಿಸಿಬಿಡಿ. ಈಗ ಖಾತ್ರಿಯಾಗಿದೆ, ಹೆಣ ಬೀಳಿಸಲು ಪೊಲೀಸರಿಗೆ ಆದೇಶ ನೀಡಿದವರು ನೀವೇ ಎಂದು. ಚುನಾಯಿತ ಸರಕಾರವೊಂದು ಇಷ್ಟು ಅಮಾನವೀಯ, ಕ್ರೂರಿ ಕೋಮುವಾದಿ ಆಗಬಾರದು. ಮಂಗಳೂರು ಗಲಭೆಯಲ್ಲಿ ಸತ್ತವರಿಗೆ ಪರಿಹಾರ ಇಲ್ಲ ಎಂದು ಹೇಳಿರುವ ಯಡಿಯೂರಪ್ಪ ನಿರೀಕ್ಷೆಯಂತೆ ತನಿಖೆಯ ಮೊದಲೇ ತೀರ್ಪು ನೀಡಿದ್ದಾರೆ’

-ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ

ಮಂಗಳೂರಿನ ಗೋಲಿಬಾರ್ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ಮತ್ತು ಸಿಐಡಿ ತನಿಖೆಗೆ ಸರಕಾರ ಆದೇಶಿಸಬಹುದು. ಆದರೆ, ಗೋಲಿಬಾರ್ ನಡೆಸುವ ಪರಿಸ್ಥಿತಿ ಇತ್ತೇ, ಮಾರ್ಗಸೂಚಿ ಪಾಲಿಸಲಾಗಿದೆಯೆ ಅಥವಾ ಇಲ್ಲವೇ ಎಂಬ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲಿದೆ

-ಬಿ.ಟಿ.ವೆಂಕಟೇಶ್, ಹೈಕೋರ್ಟ್‌ನ ಹಿರಿಯ ನ್ಯಾಯವಾದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News