×
Ad

ಸಿಎಎ ಕಾಯ್ದೆಯಿಂದ ಕೊಡವರ ಅಸ್ತಿತ್ವಕ್ಕೆ ಧಕ್ಕೆ: ಕೊಡವ ನ್ಯಾಷನಲ್ ಕೌನ್ಸಿಲ್

Update: 2019-12-25 22:38 IST

ಮಡಿಕೇರಿ, ಡಿ.25: ಮುಸ್ಲಿಮೇತರರಾದ ಹಿಂದುಗಳು, ಸಿಖ್ಖರು, ಪಾರ್ಸಿಗಳು, ಬೌದ್ಧರು ಹಾಗೂ ಜೈನರನ್ನು ಭಾರತೀಯ ನಾಗರಿಕರೆಂದು ಪರಿಗಣಿಸಿ ಅಧಿಕೃತವಾಗಿ ನೆಲೆಯೂರಿಸಲು ಸಿಎಎಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಹೀಗೆ ನೆಲೆ ಪಡೆಯುವವರಿಗೆ ಕೊಡಗಿನಲ್ಲೂ ಆಶ್ರಯ ನೀಡುವ ಅನಿವಾರ್ಯತೆ ಎದುರಾದಲ್ಲಿ ಮೂಲ ನಿವಾಸಿ ಕೊಡವರ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. 

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ 371ರ ವಿಧಿಯಡಿ ಕೊಡವರಿಗೆ ಸ್ವಾಯತ್ತತೆ ನೀಡಿದಾಗ ಮಾತ್ರ ಅತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಜನಾಂಗ ಉಳಿಯಲು ಸಾಧ್ಯ. ಸಿಎಎ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ಆದರೆ ಅತ್ಯಂತ ಸಣ್ಣ ಭೂ ಪ್ರದೇಶವಾದ ಕೊಡಗಿನಲ್ಲಿ ನೆಲೆಸಿರುವ ಮೂಲ ನಿವಾಸಿ ಕೊಡವರ ನೆಲೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ 72 ವರ್ಷಗಳಿಂದ ಭಾರತ ಒಕ್ಕೂಟದೊಳಗೆ ಈ ದೇಶ ಪ್ರೇಮಿ ಕೊಡವರು ರಾಜ್ಯ ರಹಿತ ನಾಗರಿಕರಂತೆಯೂ ಮತ್ತು ಕಳೆದ 64 ವರ್ಷಗಳಿಂದ ಕರ್ನಾಟಕದ ಅಡಿಯಲ್ಲಿ ಕೊಡವರು ಪರಕೀಯರಂತೆಯೂ ಎರಡನೇ ದರ್ಜೆಯ ನಾಗರೀಕರಂತೆಯೂ ಬದುಕಬೇಕಾಗಿದ್ದು ದುರಂತ. ಕಾಶ್ಮೀರಿಗಳು ಪರಿಪೂರ್ಣ ವಿಲೀನವಾಗಿ 5 ತಿಂಗಳಲ್ಲೇ ಅವರ ಆತಂಕ ನಿವಾರಣೆಗೆ ಮುಂದಾಗಿ ಅವರಿಗೆ 371 ವಿಧಿಯ ಅಡಿ ರಕ್ಷಣೆಗೆ ಮುಂದಾಗುವುದರ ಮೂಲಕ ವಾತ್ಸಲ್ಯ ತೋರುತ್ತಿರುವ ಸರ್ಕಾರ ಕೊಡವರನ್ನೇಕೆ ಈ ವಾತ್ಸಲ್ಯ ಸೆಲೆಯ ವ್ಯಾಪ್ತಿಯಲ್ಲಿ ಇನ್ನೂ ಪರಿಗಣನೆಗೆ ತರಲಿಲ್ಲ ಏಕೆ ಎಂದು ನಾಚಪ್ಪ ಪ್ರಶ್ನಿಸಿದ್ದಾರೆ.

ಈ ಕಾಯ್ದೆಯ ಪ್ರಕಾರ ಇತರರಿಗೆ ಕೊಡಗಿನಲ್ಲಿ ನೆಲೆ ನೀಡಿದರೆ ಇಡೀ ಕೊಡಗಿನ ಜನಸಂಖ್ಯಾ ಶಾಸ್ತ್ರವೇ ಬುಡಮೇಲಾಗಲಿದ್ದು, ಸಾಮಾಜಿಕ ಸಂಘರ್ಷ ಏರ್ಪಡಿಲಿದೆ. ಈಗಾಗಲೇ ಕೊಡಗಿನ ಗಡಿಯಲ್ಲಿ ಟಿಬೇಟ್ ನಿರಾಶ್ರಿರಿದ್ದಾರೆ. ಆದರೆ ಅವರಿಗೆ ನಾಗಾರಿಕತ್ವ ಹಕ್ಕು ನೀಡದೆ ಇರುವುದರಿಂದ ಆತಂಕ ಕಡಿಮೆ. ಆದರೆ ಈ ಸಿಎಎ ಅಡಿಯಲ್ಲಿ ಬರುವ ನಿರಾಶ್ರಿತರೇ ಬೇರೆ. ಅವರಿಗೆ ನೆಲ, ಸೂರಿನೊಂದಿಗೆ ಎಲ್ಲಾ ಸವಲತ್ತುಗಳನ್ನು ವಿಭಾಗಿಸಿ ಹಂಚಿದ್ದಲ್ಲಿ ನಮ್ಮ ಸ್ಥಿತಿಯೇನು ಎಂದು ಪ್ರಶ್ನಿಸಿದರು.

ಆತಂಕ ನಿವಾರಣೆಗಾಗಿ ಭಾರತದ ಈಶಾನ್ಯ ಪ್ರಾಂತ್ಯಕ್ಕೆ ನೀಡಿರುವ ಮತ್ತು ಜಮ್ಮು ಕಾಶ್ಮೀರಕ್ಕೆ ನೀಡಲಿರುವ ಸಂವಿಧಾನದ 371 ವಿಧಿಯೊಂದಿಗೆ ಸ್ವಾಯತ್ತತೆ ನೀಡಿ ಕೊಡವರನ್ನು ಬುಡಕಟ್ಟು ಪಟ್ಟಿಗೆ ಸೇರಿಸಿ ಎಸ್.ಟಿ ಟ್ಯಾಗ್ ನೀಡಿದರೆ ಮಾತ್ರ ಶಾಶ್ವತ ನೆಮ್ಮದಿ ಮತ್ತು ಶಾಂತಿ ದೊರಕಲಿದೆ ಎಂದು ನಾಚಪ್ಪ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News