ನಾಳೆ ಮೈಸೂರಿನಲ್ಲಿ ಸಿಎಎ-ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ: ಬಿಗಿ ಪೊಲೀಸ್ ಬಂದೋಬಸ್ತ್
ಮೈಸೂರು,ಡಿ.25: ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ನಾಳೆ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಪೊಲೀಸ್ ಇಲಾಖೆ ಮೈಸೂರು ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ.
ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ ಮೈಸೂರು ಯುನೈಟೆಡ್ ಮುಸ್ಲಿಂ ವೆಲ್ ಫೇರ್ ಟ್ರಸ್ಟ್ ಸೇರಿದಂತೆ ವಿವಿಧ ಸಂಘಟನೆಗಳು ನಾಳೆ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಮೈಸೂರಿನ ಟೌನ್ ಹಾಲ್ ಮೈದಾನದಲ್ಲಿ ಪ್ರತಿಭಟನೆ ನಡೆಯಲಿದ್ದು, ಭದ್ರತೆಗಾಗಿ 5 ಸಾವಿರ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಭದ್ರತೆಗಾಗಿ 10 ಕೆ.ಎಸ್.ಆರ್.ಪಿ., 15 ಸಿ.ಎ.ಆರ್. ತುಕಡಿಗಳ ಜೊತೆಗೆ ಅಶ್ವಾರೋಹಿ ಪಡೆಗಳು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಟೌನ್ ಹಾಲ್ ಮೈದಾನ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ 145 ಸಿ.ಸಿ ಕ್ಯಾಮರಾಗಳು ಅಳವಡಿಕೆ ಮಾಡಲಾಗಿದ್ದು, ಕಿಡಿಗೇಡಿಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಗೆ ಕರೆ ನೀಡಿರುವ ಆಯೋಜಕರು ಸೂಚಿಸಿರುವ 1,500 ಮಂದಿ ಸ್ವಯಂ ಸೇವಕರೊಂದಿಗೆ ಪೊಲೀಸರು ಸಮನ್ವಯತೆ ಸಾಧಿಸಲಿರುವ ಈ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ತಿಳಿಸಿದರು.