ಸಿಎಎ, ಎನ್‌ಆರ್‌ಸಿಸಿ ವಿರುದ್ಧ ಕೆ.ಆರ್.ಪೇಟೆಯಲ್ಲಿ ಪ್ರತಿಭಟನೆ
ಮಂಡ್ಯ, ಡಿ.25: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿಸಿ ಬುಧವಾರ ಕೆ.ಆರ್.ಪೇಟೆಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಕಾಂಗ್ರೆಸ್, ಜೆಡಿಎಸ್, ರೈತಸಂಘ, ಜಯಕರ್ನಾಟಕ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಮುಸ್ಲಿಮರು ಪಕ್ಷಬೇಧ ಮರೆತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪಟ್ಟಣದ ಮೈಸೂರು-ಚನ್ನರಾಯಪಟ್ಟಣ ರಸ್ತೆಯ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದರು. ನಂತರ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಮನವಿಪತ್ರ ಸಲ್ಲಿಸದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಎನ್‍ಆರ್‍ಸಿ ಮತ್ತು ಸಿಎಎ ಜಾರಿಗೂ ಮುನ್ನ ಸರ್ವ ಪಕ್ಷಗಳ ಸಭೆ ಕರೆದು ಒಮ್ಮತದ ನಿರ್ಧಾರ ಕೈಗೊಳ್ಳಿ, ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿ ವಿಚಾರದಲ್ಲಿ ಆತುರ ಬೇಡ ಎಂದು ಪ್ರಧಾನಿ ಮೋದಿಗೆ ತಾಕೀತು ಮಾಡಿದರು. ಕೇಸರಿ ಹಾಕಿರುವವರನ್ನು ಮಾತ್ರ ಪ್ರೀತಿಸದೇ ಎಲ್ಲಾ ಜಾತಿ ವರ್ಗಗಳ ಜನರನ್ನೂ ಪ್ರೀತಿಸುವುದನ್ನು ಕಲಿಯಿರಿ. ಇಲ್ಲದಿದ್ದರೆ ತಕ್ಕಶಾಸ್ತಿ ಅನುಭವಿಸುತ್ತೀರಿ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಕೆ.ಆರ್.ರವೀಂದ್ರಬಾಬು, ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಕುಮಾರ್, ಜಿಪಂ ಸದಸ್ಯ ಎಚ್.ಟಿ.ಮಂಜು, ಪುರಸಭೆ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್, ಬಸ್ ಕೃಷ್ಣೇಗೌಡ, ಮತ್ತಿಘಟ್ಟ ಕೃಷ್ಣಮೂರ್ತಿ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಅವರ ನೇತೃತ್ವದಲ್ಲಿ ಬಿಗಿ ಪೊಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.