ವೈಚಾರಿಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮಗಳು ಅಗತ್ಯ: ಪ್ರೊ.ರವಿವರ್ಮ ಕುಮಾರ್
ಬೆಂಗಳೂರು, ಡಿ.26: ಕೇಂದ್ರ ಸರಕಾರವು ಜನರಲ್ಲಿ ವೈಜ್ಞಾನಿಕ ಪ್ರಜ್ಞೆ ಮೂಡಿಸುವ ಕಡೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ನಗರದ ಪುರಭವನದ ಮುಂಭಾಗ ಮೂಢನಂಬಿಕೆ ವಿರೋಧಿ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕಂಕಣ ಸೂರ್ಯ ಗ್ರಹಣ ವೀಕ್ಷಣೆ ಹಾಗೂ ಮೂಢನಂಬಿಕೆ ವಿರುದ್ಧ ತಿಂಡಿ ಹಾಗೂ ಹಣ್ಣುಗಳ ಸೇವನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರದಲ್ಲಿ ಅಧಿಕಾರ ನಡೆಸುವ ಸರಕಾರಗಳು ಕೋಟ್ಯಂತರ ರೂ.ಗಳು ಹಣ ಖರ್ಚು ಮಾಡಿ ಚಂದ್ರನಲ್ಲಿಗೆ ನೌಕೆಗಳನ್ನು ಉಡಾವಣೆ ಮಾಡುತ್ತವೆ. ಹಲವು ರೀತಿಯಲ್ಲಿ ಸಂಶೋಧನೆಗಳನ್ನು ನಡೆಸಲಾಗುತ್ತದೆ. ಆದರೆ, ಅದಕ್ಕೂ ಮೊದಲು ದೇಶದೊಳಗಿರುವ ಮೌಢ್ಯವನ್ನು ನಿವಾರಿಸಲು ಮುಂದಾಗುತ್ತಿಲ್ಲ ಎಂದು ಹೇಳಿದರು.
ಇತ್ತೀಚಿಗೆ ನಮ್ಮ ದೇಶದ ಹೆಮ್ಮೆಯ ಸಂಶೋಧನಾ ಕೇಂದ್ರ ಇಸ್ರೋ ಚಂದ್ರನ ಸಂಶೋಧನೆಗಾಗಿ ‘ಚಂದ್ರಯಾನ-2’ ಮಿಷನ್ ನಡೆಸಿ, ಅದು ವಿಫಲವಾಯಿತು. ಅದಕ್ಕಾಗಿ ಸರಕಾರ ಬರೋಬ್ಬರಿ 980 ಕೋಟಿ ರೂ.ಗಳಷ್ಟು ಹಣ ಖರ್ಚು ಮಾಡಿದ್ದರು. ಚಂದ್ರಯಾನದ ವೈಫಲ್ಯವನ್ನು ಪ್ರಧಾನಿ ಮೋದಿ ಸಾಧನೆ ಎಂಬಂತೆ ಬಿಂಬಿಸಲಾಯಿತು ಎಂದು ದೂರಿದರು.
ದೇಶದ ಜನರ ಮನಸ್ಸಿನಲ್ಲಿ ತುಂಬಿಕೊಂಡಿರುವ ಮೂಢನಂಬಿಕೆಯನ್ನು ಮೊದಲು ತೊಲಗಿಸಬೇಕಿದೆ. ಅದಕ್ಕಾಗಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಘಟಿತವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಜನರು ವೈಜ್ಞಾನಿಕತೆಯನ್ನು ಅರ್ಥ ಮಾಡಿಕೊಳ್ಳಬೇಕು. ದಿನದಿಂದ ದಿನಕ್ಕೆ ವಿಜ್ಞಾನ ಬೆಳೆಯುತ್ತಿದೆ, ಆದರೆ, ಇನ್ನೂ ಜನರು ವೌಢ್ಯದಲ್ಲಿಯೇ ತೇಲಾಡುತ್ತಿದ್ದಾರೆ ಎಂದರು.
ನಮ್ಮ ದೇಶದಲ್ಲಿ ಅಪನಂಬಿಕೆಯಿಂದ ಆರಂಭವಾದ ಮೂಢನಂಬಿಕೆ ದೇಶದ ವೆುೀಲೆ ಕರಾಳ ಛಾಯೆ ಬೀರಿದೆ. ಸಾಮಾನ್ಯವಾಗಿ ನಡೆಯುವ ಆಕಾಶ ಕಾಯದ ಕತ್ತಲು-ಬೆಳಕಿನ ಆಟವನ್ನು ಗಂಭೀರ, ದುರಂತ ಎಂಬಂತೆ ಬಿಂಬಿಸಲಾಗಿದೆ. ಸೂರ್ಯ ಗ್ರಹಣವನ್ನೇ ಮೂಢನಂಬಿಕೆಯಲ್ಲಿ ಮುಳುಗಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ವಿಜ್ಞಾನದ ಸಂಶೋಧನೆಗಳ ಮೂಲಕ ಇಂದು ನಾವು ಚಂದ್ರನಲ್ಲಿಗೆ ಹೋಗುತ್ತಿದ್ದೇವೆ. ಆದರೆ, ಇಂದಿಗೂ ದೇಶದಲ್ಲಿ ಮೂಢನಂಬಿಕೆ ಜೀವಂತವಾಗಿರುವುದು ದುರಂತ ಎಂದು ತಿಳಿಸಿದರು.
ದೇಶದಲ್ಲಿನ ಜ್ಯೋತಿಷಿಗಳು, ಮಂತ್ರವಾದಿಗಳು ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಸಮಾಜದಲ್ಲಿ ತಪ್ಪು ಸಂದೇಶ ನೀಡುವ ಮೂಲಕ ಮೌಢ್ಯವನ್ನು ತುಂಬುತ್ತಿದ್ದಾರೆ. ಆದರೆ, ಇದೇ ಜ್ಯೋತಿಷಿಗಳ ಮಕ್ಕಳು ದೇಶ-ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದು ಸುಖವಾಗಿದ್ದಾರೆ ಎಂದು ಆಪಾದಿಸಿದರು.
ಇದೇ ಸಂದರ್ಭದಲ್ಲಿ ಇಲ್ಲಿ ಪಾಲ್ಗೊಂಡಿದ್ದವರಿಗೆ ಬಿಸಿಬೇಳೆ ಬಾತ್ ಹಾಗೂ ಕಲ್ಲಂಗಡಿ, ಪಪ್ಪಾಯ, ಆಪಲ್ ಸೇರಿದಂತೆ ಹಲವು ರೀತಿಯ ಹಣ್ಣು-ಹಂಪಲುಗಳನ್ನು ವಿತರಣೆ ಮಾಡಿ, ಸೇವಿಸಿದರು. ಈ ವೇಳೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ರೈತ ಮುಖಂಡ ವೀರಸಂಗಯ್ಯ, ವೇದಿಕೆಯ ಮುಖ್ಯಸ್ಥ ನರಸಿಂಹಮೂರ್ತಿ ಸೇರಿದಂತೆ ಹಲವರಿದ್ದರು.
ಸೂರ್ಯ ಗ್ರಹಣ ನಡೆಯುವುದು ಖಗೋಳದಲ್ಲಿ. ಭೂಮಿ ಮೇಲೆ ಅದರ ಪರಿಣಾಮ ಏನೂ ಬೀರುವುದಿಲ್ಲ. ಕೆಲವರು ಗ್ರಹಣದ ಬಗ್ಗೆ ತಪ್ಪು ಕಲ್ಪನೆ ಮೂಡಿಸಿದ್ದಾರೆ. ನಾವಿಲ್ಲಿ, ಆಹಾರ ತಯಾರಿಸಬಹುದು ಹಾಗೂ ಸೇವನೆಯನ್ನೂ ಮಾಡಬಹುದಾಗಿದೆ. ತಮ್ಮ ಸ್ವಾರ್ಥಕ್ಕಾಗಿ, ಜನರನ್ನು ವಂಚಿಸಲು ಮೌಢ್ಯದ ವಾತಾವರಣ ನಿರ್ಮಿಸಿದ್ದಾರೆ.
-ಬಿ.ಟಿ.ಲಲಿತಾ ನಾಯಕ್, ಮಾಜಿ ಸಚಿವೆ