ಪೌರತ್ವ ಕಾಯ್ದೆ ತಿದ್ದುಪಡಿಗೆ ಮನಮೋಹನ್ ಸಿಂಗ್, ಮಮತಾ ಬ್ಯಾನರ್ಜಿ ಆಗ್ರಹಿಸಿದ್ದರು: ಶೋಭಾ ಕರಂದ್ಲಾಜೆ

Update: 2019-12-26 14:41 GMT

ಬೆಂಗಳೂರು, ಡಿ.26: ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಬೇಕೆಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹಾಗೂ ಸಂಸದೆಯಾಗಿದ್ದ ವೇಳೆ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದರು. ಆದರೆ, ಈಗ ಬಿಜೆಪಿ ಸರಕಾರ ತಿದ್ದುಪಡಿ ಜಾರಿಗೆ ತಂದಿರುವುದರಿಂದ, ಪ್ರತಿಭಟನೆಗಳು ಹಿಂಸಾರೂಪ ತಳೆಯಲು ಪ್ರತಿಪಕ್ಷಗಳು ಪ್ರಚೋದಿಸುತ್ತಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಗುರುವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಕ್ಕಷ್ಟೇ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಆದರೆ, ಪ್ರತಿಪಕ್ಷಗಳು ದೇಶದ ಹಿತದೃಷ್ಟಿಯಿಂದ ಯೋಚಿಸುವುದನ್ನು ಬಿಟ್ಟು, ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ದೂರಿದರು.

ಭಾರತದಲ್ಲಿರುವ ಯಾರಿಗೂ ಕಾಯ್ದೆಯಿಂದ ತೊಂದರೆ ಇಲ್ಲ. ಮುಸ್ಲಿಮರಿಗೆ ಏನಾದರೂ ತೊಂದರೆಯಾಗುವಂತಹ ಅಂಶಗಳಿದ್ದರೆ ಅವರು ಮುಕ್ತ ಚರ್ಚೆಗೆ ಬರಬೇಕು. ಇನ್ನು ರಾಷ್ಟ್ರೀಯ ಜನಸಂಖ್ಯೆ ನೋಂದಣಿ(ಎನ್‌ಪಿಆರ್) ವಿಷಯವನ್ನು ಎತ್ತಿ ಮತ್ತೊಂದು ಗೊಂದಲ ಸೃಷ್ಟಿಸಲು ಪ್ರತಿಪಕ್ಷಗಳು ಯತ್ನಿಸುತ್ತಿವೆ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಗಲಭೆಕೋರರ ಗುಂಪು ಬಂದರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ, ಶಸ್ತ್ರಾಸ್ತ್ರಗಳನ್ನು ದೋಚಲು ಯತ್ನಿಸಿತ್ತು. ಹೊರಗಿನ ಪೊಲೀಸರು ಸ್ಥಳಕ್ಕೆ ಬಾರದಂತೆ ಇದ್ದ ನಾಲ್ಕು ರಸ್ತೆಗಳನ್ನು ಮರದದಿಂಬು, ಕಲ್ಲುಗಳು ಹಾಗೂ ಕಂಬಗಳಿಂದ ಮುಚ್ಚಲಾಗಿತ್ತು. ಪೊಲೀಸರು ಅನ್ಯ ಮಾರ್ಗವಿಲ್ಲದೆ ಗುಂಡು ಹಾರಿಸಿದ್ದಾರೆ ಎಂದು ಗೋಲಿಬಾರ್ ನಡೆಸಿದ್ದನ್ನು ಅವರು ಸಮರ್ಥಿಸಿಕೊಂಡರು.

ಪೊಲೀಸರು ಕ್ರಮ ತೆಗೆದುಕೊಳ್ಳದಿದ್ದಲ್ಲಿ, ಮೂರು ಸಾವಿರ ಮದ್ದುಗುಂಡು, 45 ಬಂದೂಕುಗಳು ಗಲಭೆಕೋರರ ಕೈ ಸೇರುವ ಅಪಾಯವಿತ್ತು. ಕರಾವಳಿಯಲ್ಲಿ ಕೇರಳದ ಪರಿಸ್ಥಿತಿ ಸೃಷ್ಟಿಸುವ ಷಡ್ಯಂತ್ರ ನಡೆಯುತ್ತಿದೆ. ಇದರ ಹಿಂದಿರುವ ಶಕ್ತಿಗಳನ್ನು ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ಪಶ್ಚಿಮ ಬಂಗಾಳ ಮತ್ತು ಕೇರಳ ಸರಕಾರಗಳು ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿನಿಂದ ಮೃತಪಟ್ಟವರಿಗೆ ಪರಿಹಾರ ನೀಡಲು ಮುಂದಾಗಿವೆ. ಕೇರಳದಲ್ಲಿ ವರ್ಷಕ್ಕೆ 20-30 ಹಿಂದೂ ಕಾರ್ಯಕರ್ತರು ಹತ್ಯೆಯಾದರೂ ಯಾರಿಗೂ ಪರಿಹಾರ ನೀಡದ ಅಲ್ಲಿನ ಸರಕಾರ, ಒಂದು ಕೋಮು ಓಲೈಸುವುದಕ್ಕೆ ಇಂತಹ ನಾಟಕ ಆಡುತ್ತಿದೆ ಎಂದು ಅವರು ದೂರಿದರು.

ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಕೇರಳ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ. ವಾಸ್ತವವಾಗಿ ಅಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಕೇರಳ ಮುಖ್ಯಮಂತ್ರಿಯಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಮೃತಪಟ್ಟವರಿಗೆ ತನಿಖೆ ನಂತರವೇ ಪರಿಹಾರ ನೀಡಲಾಗುವುದು. ಸರಕಾರದ ನಿರ್ಧಾರ ಸಮಯೋಚಿತವಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್.ಆನಂದ್, ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುನಿಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News