ಎಂಇಎಸ್‌ಗೆ ಗುಂಡಿಕ್ಕಿ ಎಂದು ಯಾಕೆ ಹೇಳಿಲ್ಲ?: ಕೇಂದ್ರ ಸಚಿವ ಅಂಗಡಿಗೆ ಭೀಮಾಶಂಕರ್ ಪಾಟೀಲ್ ಪ್ರಶ್ನೆ
ಬೆಳಗಾವಿ, ಡಿ.26: ಪ್ರತಿಭಟನೆಗಳ ಹೆಸರಿಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಿದವರನ್ನು ಕಂಡಲ್ಲಿ ಗುಂಡಿಕ್ಕಿ ಎಂದು ಹೇಳುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಗಡಿ ವಿವಾದ ಹೆಸರಿನಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಿರುವ ಎಂಇಎಸ್‌ಗೆ ಬಗ್ಗೆ ಯಾಕೆ ಈ ಹೇಳಿಕೆ ನೀಡಿಲ್ಲ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಪ್ರಶ್ನಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಿಂದಲೋ ಬಂದವರನ್ನು ಗುಂಡಿಕ್ಕಿ ಎಂದು ಹೇಳುವ ಸುರೇಶ್ ಅಂಗಡಿ, ಗಡಿ ವಿಚಾರದಲ್ಲಿ ಕುತಂತ್ರ ಬುದ್ಧಿ ತೋರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಬಗ್ಗೆ ಯಾಕೆ ಬಾಯಿ ಬಿಡುವುದಿಲ್ಲ ಎಂದು ಕಿಡಿಗಾರಿದರು.
ಕಳೆದ 64 ವರ್ಷಗಳಿಂದಲೂ ಎಂಇಎಸ್‌ನವರು ಬೆಳಗಾವಿಯಲ್ಲಿ ಗಡಿ ವಿಚಾರವನ್ನು ಮುಂದಿಟ್ಟುಕೊಂಡು ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿಯನ್ನುಂಟು ಮಾಡಿದ್ದಾರೆ. ಅವರಿಗೆ ಯಾಕೆ ಕಂಡಲ್ಲಿ ಗುಂಡಿಕ್ಕಿ ಎಂದು ಸುರೇಶ್ ಅಂಗಡಿ ಹೇಳುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಗಡಿ ವಿವಾದವನ್ನು ‘ಪಾಕ್ ಆಕ್ರಮಿತ ಕಾಶ್ಮೀರ(ಪಿಓಕೆ)’ಗೆ ಹೋಲಿಸಿರುವ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ತಿಳಿವಳಿಕೆ ಇಲ್ಲ. ರಾಜ್ಯ ಸರಕಾರವು ಗಡಿ ವಿವಾದ ವಿಚಾರದಲ್ಲಿ ದಿಟ್ಟವಾದ ಕ್ರಮ ಕೈಗೊಂಡು, ಮಹಾರಾಷ್ಟ್ರ ಮುಖ್ಯಮಂತ್ರಿಗೆ ದಿಟ್ಟ ಉತ್ತರ ನೀಡದಿರುವುದು ದುರ್ದೈವದ ಸಂಗತಿ ಎಂದು ಭೀಮಾಶಂಕರ ಪಾಟೀಲ್ ಹೇಳಿದರು.
ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಒಂದಾಗುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಎಂಇಎಸ್ ಅನ್ನು ತಮ್ಮ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರವು ಗಡಿ ವಿಚಾರದಲ್ಲಿ ಕಳಕಳಿ ಇರುವಂತಹ ಜನಪ್ರತಿನಿಧಿಯನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕು. ಅಲ್ಲದೇ, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬೆಳಗಾವಿ ಜಿಲ್ಲೆಗೆ ಸ್ಥಳಾಂತರ ಮಾಡಬೇಕು ಎಂದು ಭೀಮಾ ಶಂಕರ ಪಾಟೀಲ್ ಆಗ್ರಹಿಸಿದರು.
ಮಹಾದಾಯಿ ನೀರಾವರಿ ಯೋಜನೆಗಾಗಿ ರೈತರು ಸೇರಿದಂತೆ ಎಲ್ಲ ಹೋರಾಟಗಾರರು ನಿರಂತರವಾಗಿ ನಾಲ್ಕು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರಕಾರಗಳಿದ್ದರೂ, ಯೋಜನೆ ಅನುಷ್ಠಾನಗೊಳಿಸುವುದರಲ್ಲಿ ವಿಫಲವಾಗಿದ್ದಾರೆ ಎಂದು ಅವರು ಕಿಡಿಗಾರಿದರು.
ಮಹಾದಾಯಿ ಯೋಜನೆಯನ್ನು ಒಂದು ವಾರದಲ್ಲಿ ಅನುಷ್ಠಾನ ಅನುಷ್ಠಾನಗೊಳಿಸದಿದ್ದರೆ, ರಾಜ್ಯದ ಎಲ್ಲ ಸಂಸದರ ಮನೆಗಳಿಗೆ ಕಲ್ಪಿಸಲಾಗಿರುವ ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಭೀಮಾಶಂಕರ ಪಾಟೀಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕನ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಬಾಬು ಸಂಗೋಡಿ, ಮುಖಂಡರಾದ ಆನಂದ ಅಡ್ಡೆ, ಸುಷ್ಮಾ ಯಾದವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.