×
Ad

ಕಂಕಣ ಸೂರ್ಯ ಗ್ರಹಣ: ಬಣಗುಟ್ಟಿದ ರಾಜ್ಯದ ಹಲವು ಪ್ರಮುಖ ನಗರಗಳು

Update: 2019-12-26 22:58 IST

ಬೆಂಗಳೂರು, ಡಿ.26: ಕಂಕಣ ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ರಾಜಧಾನಿ ಸೇರಿದಂತೆ ರಾಜ್ಯದ ಹಲವು ಬೀದಿಗಳು ಗುರುವಾರ ಮಧ್ಯಾಹ್ನದವರೆಗೂ ಜನಸಂದಣಿಯಿಲ್ಲದೆ ಬಣಗುಡುತ್ತಿದ್ದವು.

ಗುರುವಾರ ಬೆಳಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ಕಂಕಣ ಸೂರ್ಯ ಗ್ರಹಣ ಸಂಭವಿಸಿತ್ತು. ಹಲವರು ತಮ್ಮ ಮನೆಗಳ ಮುಂದೆಯೇ ಗ್ರಹಣ ವೀಕ್ಷಣೆ ಮಾಡಿದರೆ, ಮತ್ತಷ್ಟು ಜನರು ಕೆಲವು ಕಡೆ ಸಂಘಟನೆಗಳಿಂದ ಆಯೋಜಿಸಿದ್ದ ಸ್ಥಳಕ್ಕೆ ತೆರಳಿ ಗ್ರಹಣ ವೀಕ್ಷಿಸಿದರು. ಆದರೆ, ಬಹುತೇಕ ಜನರು ಮನೆಗಳಿಂದ ಹೊರಬಂದಿರಲಿಲ್ಲ.

ರಾಜಧಾನಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ ಸೇರಿದಂತೆ ಹಲವು ನಗರಗಳಲ್ಲಿನ ಪ್ರಮುಖ ಬೀದಿಗಳಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆದಿರಲಿಲ್ಲ. ಅಲ್ಲದೆ, ಸಂಚಾರ ದಟ್ಟಣೆಯೂ ಕಡಿಮೆಯಿತ್ತು. ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದ ಜನರು ಮನೆಯಿಂದ ಹೊರ ಬಂದಿರಲಿಲ್ಲ. ಜತೆಗೆ, ಬುಧವಾರ ಕ್ರಿಸ್‌ಮಸ್ ರಜೆಯೂ ಇತ್ತು.

ನಗರದಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಜನರು ಅತಿ ಕಡಿಮೆಯಿತ್ತು. ಉಳಿದಂತೆ ಟ್ಯಾಕ್ಸಿ, ಆಟೋ ಸೇವೆ ವಿರಳವಾಗಿತ್ತು. ಕಚೇರಿಗಳಿಗೆ ತೆರಳಲೇಬೇಕಾದವರು ಅಷ್ಟೇ ಮನೆಯಿಂದ ಹೊರಬಂದಿದ್ದರು. ಉಳಿದಂತೆ ಬಹುತೇಕರು ಮನೆಯಲ್ಲಿಯೇ ಉಳಿದುಕೊಂಡಿದ್ದರು.

ಬೆಂಗಳೂರಿನಲ್ಲಿ ಪ್ರತಿದಿನ ಜನದಟ್ಟಣೆಯಿಂದ ಗಿಜಿಗುಡುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ಮೆಜೆಸ್ಟಿಕ್, ಬನ್ನೇರುಘಟ್ಟ, ಬಾಣಸವಾಡಿ, ಹೊಸೂರು ಸೇರಿದಂತೆ ಹಲವು ರಸ್ತೆಗಳಲ್ಲಿ ಅಘೋಷಿತ ಬಂದ್ ಆದಂತೆ ಭಾಸವಾಗುತ್ತಿತ್ತು. ಜನರೇ ಇಲ್ಲದಿದ್ದರಿಂದ ಅನಿವಾರ್ಯವಾಗಿ ಎಲ್ಲ ಅಂಗಡಿಗಳು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿದ್ದರು.

ಗ್ರಹಣ ಆರಂಭವಾಗುತ್ತಿದ್ದಂತೆಯೇ ಎಲ್ಲ ದೇವಾಲಯಗಳನ್ನು ಮುಚ್ಚಲಾಗಿತ್ತು. ಗ್ರಹಣ ಅಂತ್ಯಗೊಳ್ಳುತ್ತಿದ್ದಂತೆ ಬಾಗಿಲು ತೆರೆದು, ವಿಶೇಷ ಪೂಜೆಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ದೇವಾಲಯಗಳಿಗೆ ತೆರಳಿ ದೇವರಿಗೆ ನಮಸ್ಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News