×
Ad

ಮಂಡ್ಯದಲ್ಲಿ ಜನಜಾಗೃತಿ ಸಭೆ: ಸಿಎಎ, ಎನ್‌ಆರ್‌ಸಿ ವಿರುದ್ಧ ನಿರಂತರ ಹೋರಾಟಕ್ಕೆ ಕರೆ

Update: 2019-12-26 23:07 IST

ಮಂಡ್ಯ, ಡಿ.26: ಪೌರತ್ವ ತಿದ್ದುಪಡಿ ಕಾನೂನು ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ನಿರಂತರ ಹೋರಾಟಕ್ಕೆ ಗುರುವಾರ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ದಲಿತ, ರೈತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಡೆದ ಪ್ರತಿಭಟನೆ ಹಾಗೂ ಜನಜಾಗೃತಿ ಸಭೆಯಲ್ಲಿ ಕರೆ ಕೊಡಲಾಯಿತು.

ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಿಎಎ ಮತ್ತು ಎನ್‌ಆರ್‌ಸಿ ಕೈಬಿಡುವವರೆಗೂ ತಮ್ಮ ಹೋರಾಟ ನಿಲ್ಲದು ಸಭೆಯಲ್ಲಿ ಒಕ್ಕೂರಲಿನಿಂದ ಪ್ರತಿಜ್ಞೆ ಮಾಡಿ, ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್, ಸಿಎಎ, ಎನ್‌ಆರ್‌ಸಿ ಹಿಂತೆಗೆಯುವವರೆಗೂ ಚಳವಳಿ ಕೈಬಿಡುವುದಿಲ್ಲ ಮತ್ತು ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟ ಮೊಳಗಬೇಕಾಗಿದೆ ಎಂದು ಹೇಳಿದರು. ಸಂವಿಧಾನ ರಕ್ಷಿಸಬೇಕಾದ ರಾಷ್ಟ್ರಪತಿಗಳು ಮಧ್ಯರಾತ್ರಿ ಸಿಎಎ ಕಾಯ್ದೆಗೆ ಸಹಿಹಾಕಿ ತಮ್ಮ ಜವಾಬ್ಧಾರಿತನ ತೋರಿದ್ದಾರೆ. ಹಾಗಾಗಿ ನಮ್ಮ ಸಂವಿಧಾನ ಕಾಪಾಡಿಕೊಳ್ಳಲು ಹೋರಾಟ ನಡೆಸಬೇಕಾದ ಅಗತ್ಯತೆ ಬಂದಿದೆ ಎಂದು ಅವರು ಪ್ರತಿಪಾದಿಸಿದರು.

ಎನ್‍ಪಿಆರ್ ಗೂ ಎನ್‌ಆರ್‌ಸಿಗೂ ಸಂಬಂಧವಿಲ್ಲವೆಂದು ಮೋದಿ-ಶಾ ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ಎನ್‍ಪಿಆರ್ ದಾಖಲಾತಿಗಳ ಆಧಾರದ ಮೇಲೆ ಎನ್‌ಆರ್‌ಸಿ ತೀರ್ಮಾನವಾಗುತ್ತದೆ. ಇದು ಬಹಳ ಅಪಾಯಕಾರಿ ಎಂದು ಅವರು ಎಚ್ಚರಿಸಿದರು. ನಿರುದ್ಯೋಗ ನಿವಾರಣೆ, ಕಪ್ಪು ಹಣ ಬಹಿರಂಗ, ಹೀಗೆ ಮೋದಿ-ಶಾ ಜೋಡಿ ಸುಳ್ಮ್ಳಗಳ ಸರಮಾಲೆಯನ್ನೇ ಪೋಣಿಸುತ್ತಿದೆ. ಹಾಗೆಯೇ ಪೌರತ್ವ ತಿದ್ದುಪಡಿ ಕಾನೂನಿನಿಂದ ಏನೂ ಆಗುವುದಿಲ್ಲ ಎನ್ನುವುದೂ ಸುಳ್ಳು. ಇವರಿಬ್ಬರೂ ಜುಮ್ಲಾ ಜೋಡಿ ಎಂದು ಪ್ರಕಾಶ್ ವ್ಯಂಗ್ಯವಾಡಿದರು.

ಈ ದೇಶದ ಸ್ವಾತಂತ್ರ್ಯಕ್ಕೆ ಯಾರು ಯಾರು ಬಲಿದಾನವಾಗಿದ್ದಾರೆ ಎಂಬುದನ್ನು ತಿಳಿಯಲು ದೇಶದ ಇಂಡಿಯಾ ಗೇಟ್‍ನ ಕಲ್ಲಿನ ಮೇಲೆ ಕೆತ್ತಿರುವ ಹೆಸರುಗಳನ್ನು ನೋಡಿದರೆ ತಿಳಿಯುತ್ತಿದೆ ಎಂದು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂಮರ ಕೊಡುಗೆಯನ್ನು ಉಲ್ಲೇಖಿಸಿದರು. ನಾವು ಪಂಕ್ಚರ್ ಹಾಕುತ್ತೇವೆ ನಿಜ. ಆದರೆ, ಬಿಜೆಪಿಯವರು ದೇಶದ ವ್ಯವಸ್ಥೆಯನ್ನೇ ಪಂಕ್ಚರ್ ಮಾಡುತ್ತಿದ್ದಾರೆ. ಪಂಕ್ಚರ್ ಆಗುತ್ತಿರುವ ದೇಶದ ವ್ಯವಸ್ಥೆಗೆ ನಾವು ಪಂಕ್ಚರ್ ಹಾಕುತ್ತಿದ್ದೇವೆ ಎಂದು ಅವರು ತಿರುಗೇಟು ನೀಡಿದರು.

ಪ್ರಜಾತಂತ್ರ ಧೂಳೀಪಟ: ಸುನಂದಾ ಜಯರಾಂ
ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಮಾತನಾಡಿ, ಬಿಜೆಪಿ ಬಹುಮತ ಪಡೆದ ಆಧಾರವನ್ನಿಟ್ಟುಕೊಂಡು ಪ್ರಧಾನಿ ಮೋದಿ ಪ್ರಜಾತಂತ್ರ ವ್ಯವಸ್ಥೆಯನ್ನು ಧೂಳೀಪಟ ಮಾಡಿ ಸರ್ವಾಧಿಯಾಗಲು ಹೊರಟಿದ್ದಾರೆ ಎಂದು ಟೀಕಿಸಿದರು.

ಕೇಂದ್ರದ ಬಿಜೆಪಿ ಸರಕಾರ ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಧರ್ಮಾಧಾರಿತ ರಾಷ್ಟ್ರವನ್ನಾಗಿಸುವ ಕುತಂತ್ರ ಮಾಡುತ್ತಿದೆ. ಇದರ ವಿರುದ್ಧ ಹೋರಾಟದಿಂದ ಜನರು ಒಂದು ಹೆಜ್ಜೆ ಹಿಂದೆ ತೆಗೆದರೂ ದೊಡ್ಡ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಅಮಾನವೀಯ ಸಿಎಎ, ಎನ್‌ಆರ್‌ಸಿಗೆ ಹಲವು ರಾಜ್ಯಗಳು ವಿರೋಧಿಸಿವೆ. ನಮ್ಮ ರಾಜ್ಯದ 224 ಜನ ಶಾಸಕರು ಸಿಎಂ ಮೇಲೆ ಒತ್ತಡ ತರಬೇಕು. ಸದನದಲ್ಲಿ ಮಾತನಾಡುವ ಹಲವು ಶಾಸಕರಿದ್ದು, ಅವರು ಸಮರ್ಥವಾಗಿ ಮಾತನಾಡಬೇಕು ಎಂದು ಅವರು ಒತ್ತಾಯಿಸಿದರು.

ದಸಂಸ ರಾಜ್ಯ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಎಂ.ಬಿ.ಶ್ರೀನಿವಾಸ್, ಅಂದಾನಿ ಸೋಮನಹಳ್ಳಿ, ರೈತಸಂಘದ ಲತಾ ಶಂಕರ್, ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಸಿಪಿಎಂನ ಸಿ.ಕುಮಾರಿ, ಎಂ.ಬಿ.ನಾಗಣ್ಣಗೌಡ, ಚೀರನಹಳ್ಳಿ ಲಕ್ಷ್ಮಣ್, ಅಮ್ಜದ್ ಪಾಷ, ಎಂ.ಪುಟ್ಟಮಾದು ಸೇರಿದಂತೆ ಹಲವು ಪ್ರಗತಿಪರ ಹೋರಾಟಗಾರರು ಉಪಸ್ಥಿತರಿದ್ದರು.

ಸಂವಿಧಾನದ ಆಶಯಗಳನ್ನು ಕೊಡಲಿಯಿಂದ ಕೊಚ್ಚಲು ಹೊರಟಿದ್ದಾರೆ. ನಾವು ಸುಮ್ಮನೆ ಕೂರುವುದಿಲ್ಲ, ಹೋರಾಟ ಮಾಡುತ್ತೇವೆ.
-ಮುಹಮ್ಮದ್ ತಾಹೇರ್, ಎಸ್‍ಡಿಪಿಐ ಮುಖಂಡ.

ಮುಸ್ಲಿಮರಿಗೆ ಪೌರತ್ವ ಇಲ್ಲ ಎನ್ನುತ್ತಾರೆ. ಸುಮ್ಮನಿದ್ದರೆ ಮುಂದೆ ಶೂದ್ರರನ್ನೂ ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆ.
-ಶಂಭೂನಹಳ್ಳಿ ಸುರೇಶ್, ರೈತಸಂಘದ ಜಿಲ್ಲಾಧ್ಯಕ್ಷ.

ನಮ್ಮ ಎದೆ ಬಗೆದರೆ ಅಕ್ಷರ ಇಲ್ಲದಿರಬಹುದು, ಅಂತಃಕರಣ ಇದೆ. ನಿಮ್ಮ ಎದೆಯಲ್ಲಿರುವಂತೆ ಗೋಡ್ಸೆ ಇಲ್ಲ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಇದ್ದಾರೆ. 
-ಎಲ್.ಸಂದೇಶ್, ಹೋರಾಟಗಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News