'ಯೇಸುಕ್ರಿಸ್ತ ಪ್ರತಿಮೆ' ವಿಚಾರ: ಬಿಜೆಪಿ ನಾಯಕರಿಗೆ ಡಿ.ಕೆ.ಶಿವಕುಮಾರ್ ತಿರುಗೇಟು

Update: 2019-12-27 12:58 GMT

ಬೆಂಗಳೂರು, ಡಿ.27: ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ನಿರುದ್ಯೋಗಿಯಾಗಿದ್ದಾರೆ. ಅವರಿಗೆ ಕೆಲಸ ಬೇಕು, ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಸುಡಬೇಕು, ಬದಲಾವಣೆ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಶುಕ್ರವಾರ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿ ಬೆಟ್ಟದಲ್ಲಿ ಯೇಸುಕ್ರಿಸ್ತರ ಪ್ರತಿಮೆ ನಿರ್ಮಾಣಕ್ಕೆ 10 ಎಕರೆ ಜಾಗವನ್ನು ಕೊಟ್ಟಿರುವುದಕ್ಕೆ ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿದರು.

ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಭದ್ರ ಬುನಾದಿಯಾದ ಸಮಾನತೆ ಮತ್ತು ಸರ್ವ ಧರ್ಮ ಸಹಿಷ್ಣುತೆಯಲ್ಲಿ ನಂಬಿಕೆ ಇಟ್ಟಿರುವವನು ನಾನು. ನನ್ನ ಕನಕಪುರ ಕ್ಷೇತ್ರದಲ್ಲಿ ಎಲ್ಲ ಜಾತಿ, ಧರ್ಮದ ಜನರೂ ಇದ್ದಾರೆ. ಅವರ ಭಾವನೆ ಗೌರವಿಸುವುದು ನಮ್ಮ ಧರ್ಮ ಎಂದು ಅವರು ಹೇಳಿದರು.

ಯೇಸು ಪ್ರತಿಮೆಗೆ ಜಾಗ ಕೊಟ್ಟಿರುವುದಷ್ಟೇ ಅಲ್ಲ, ನಾನು ಸಚಿವನಾಗಿದ್ದಾಗ ಕೆಂಪೇಗೌಡ ಪ್ರಾಧಿಕಾರ ರಚಿಸಿ, ಮೆಯೋಹಾಲ್‌ನಲ್ಲಿ ಕಚೇರಿ ಸ್ಥಾಪಿಸಿ, ಬೆಂಗಳೂರಿನಲ್ಲಿ ಐದು ಎಕರೆ ಜಮೀನು ಮಂಜೂರು ಮಾಡಿಸಲಾಗಿದೆ. ಕೆಂಪೇಗೌಡ ಜಯಂತಿ ಆಚರಣೆಗಾಗಿ ಸರಕಾರಿ ರಜೆ ಘೋಷಣೆ ಮಾಡಿಸಿದ್ದೇನೆ ಎಂದು ಅವರು ತಿಳಿಸಿದರು.

ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯ ಹುಟ್ಟೂರು ರಾಮನಗರದ ಬಿಡದಿಯ ಬಾಣಂದೂರು ಹಾಗೂ ಸಿದ್ಧಗಂಗಾ ಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರ ಹುಟ್ಟೂರು ರಾಮನಗರದ ಮಾಗಡಿ ಗ್ರಾಮದ ಪ್ರಗತಿಗೆ ತಲಾ 25 ಕೋಟಿ ರೂ. ನಮ್ಮ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮಂಜೂರಾಗಿದೆ ಎಂದು ಶಿವಕುಮಾರ್ ಹೇಳಿದರು.

ಎರಡು ವರ್ಷಗಳ ಹಿಂದೆ ಟ್ರಸ್ಟ್‌ನವರು ಮೂರ್ತಿ ನಿರ್ಮಿಸಲು ಮುಂದಾಗಿದ್ದರು. ಅದು ಸರಕಾರಿ ಜಾಗವಾಗಿದ್ದರಿಂದ, ಕುಮಾರಸ್ವಾಮಿ ಸರಕಾರದಲ್ಲಿ ಆ ಜಾಗವನ್ನು ಸಂಬಂಧಪಟ್ಟವರಿಗೆ ಮಂಜೂರು ಮಾಡಿಸಿ, ಸರಕಾರಕ್ಕೆ ಪಾವತಿಸಬೇಕಾದ ಹಣವನ್ನು ನಾನೇ ಭರಿಸಿ, ಕ್ರಿಸ್ಮಸ್ ಹಬ್ಬದಂದು ಅವರಿಗೆ ಹಕ್ಕುಪತ್ರವನ್ನು ಹಸ್ತಾಂತರ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಕನಕಪುರದಲ್ಲಿ ನಮ್ಮ ಸ್ವಂತ ಜಮೀನನ್ನು ರಾಜ್ಯ ಸರಕಾರದ ವಿದ್ಯಾಸಂಸ್ಥೆಗಾಗಿ ದಾನವಾಗಿ ನೀಡಿದ್ದೇವೆ. ನೂರಾರು ದೇವಸ್ಥಾನಗಳನ್ನು ಕಟ್ಟಿಸಿಕೊಟ್ಟಿದ್ದೇವೆ. ಯಶವಂತಪುರದ ಮೈಲಸಂದ್ರದಲ್ಲಿ ಶ್ರೀರಾಮನ ದೇವಸ್ಥಾನ ಕಟ್ಟಿಸಿಕೊಟ್ಟಿದ್ದೇನೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಲೆಂದು ಮಂಗಳಕರಿ ಮಾರಮ್ಮ ದೇವಸ್ಥಾನಕ್ಕೆ ಒಂದೂವರೆ ಎಕರೆ ಜಮೀನು ಕೊಡಿಸಿದ್ದೇನೆ ಎಂದು ಅವರು ಹೇಳಿದರು.

ಮೈಸೂರಿನಲ್ಲಿರುವ ಚಾಮುಂಡಿ ಕ್ರೀಡಾಂಗಣಕ್ಕೆ ಮಹಾರಾಣಿ ಅವರಿಂದ ಖರೀದಿಸಿದ ಜಾಗವನ್ನು ದಾನವಾಗಿ ನೀಡಿದ್ದೇನೆ. ಹಾರೋಬೆಲೆಯಲ್ಲಿ 36 ಜನ ಪಾದ್ರಿಗಳಿದ್ದು, ಕನ್ನಡ ಕ್ರೈಸ್ತ ಬಾಂಧವರಿಗಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ನೂರಾರು ಸಿಸ್ಟರ್‌ಗಳನ್ನು ಕೊಟ್ಟಿರುವ ಪವಿತ್ರ ಜಾಗ ಅದು. ‘ಸೂರ್ಯ ರೈತ’ ಕಾರ್ಯಕ್ರಮವನ್ನು ಅದೇ ಸ್ಥಳದಲ್ಲಿ ಆರಂಭಿಸಿದೆ. ಈಗ ಕೇಂದ್ರ ಸರಕಾರ ‘ಸೂರ್ಯ ರೈತ’ ಕಾರ್ಯಕ್ರಮವನ್ನು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ಮಾಡುತ್ತಿದೆ ಎಂದು ಅವರು ತಿಳಿಸಿದರು.

ನಮ್ಮ ಪವಿತ್ರ ದೇಶದಲ್ಲೇ ಹುಟ್ಟಿದ ಪ್ರಭು ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣ ವಿರೋಧಿಸಿದ್ದ ಕಾಂಗ್ರೆಸ್‌ನವರು, ತಮ್ಮ ನಾಯಕಿಯನ್ನು ಮೆಚ್ಚಿಸಲು ತಮ್ಮದೇ ಹಣದಲ್ಲಿ ವ್ಯಾಟಿಕನ್‌ನಲ್ಲಿ ಹುಟ್ಟಿದ ಯೇಸುವಿನ ಪ್ರತಿಮೆ ನಿರ್ಮಿಸಲು ಹೊರಟಿದ್ದಾರೆ. ಇನ್ನು ಇವರು ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸ್ವತಃ ಸಿದ್ದರಾಮಯ್ಯನವರಿಗೂ ಆಗುವುದಿಲ್ಲ.

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

ಇಲ್ಲೊಬ್ಬ ತಿಹಾರ್ ರಿಟರ್ನ್ ಮಹನೀಯರೊಬ್ಬರು, ಯಾವುದೋ ಹುದ್ದೆಯ ಆಸೆಯೊಂದಿಗೆ, ಅವರ ಇಟಲಿಯಮ್ಮನನ್ನು ಪ್ರಸನ್ನಗೊಳಿಸಲು, ಅತಿದೊಡ್ಡ ಯೇಸುವಿನ ಪ್ರತಿಮೆ ಸ್ಥಾಪಿಸಿ ತಮ್ಮ ಪೌರುಷವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಓಲೈಕೆ ರಾಜಕೀಯಕ್ಕೆ ಪೈಪೋಟಿ ನೀಡಲು ಕಾಂಗ್ರೆಸ್ ಪಕ್ಷದಲ್ಲಿ ಇನ್ನು ಹೆಚ್ಚಿನ ಗುಲಾಮರು ಅಖಾಡಕ್ಕೆ ಇಳಿದರು ಅಚ್ಚರಿಯಿಲ್ಲ.

-ಅನಂತಕುಮಾರ್ ಹೆಗಡೆ, ಮಾಜಿ ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News