ಸಂಕಷ್ಟ ಸ್ಥಿತಿಯಲ್ಲಿನ ಆರ್ಥಿಕತೆ ಮರೆಮಾಚಲು ಸಿಎಎ ಜಾರಿ: ಮಾಜಿ ಸಂಸದ ವಿ.ಎಸ್.ಉಗ್ರಪ್ಪ
ಬೆಂಗಳೂರು, ಡಿ. 27: ದೇಶದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುತ್ತಿರುವ ವಿಚಾರ ಮರೆಮಾಚಲು ಬಿಜೆಪಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಗಳಿಗೆ ಬಿಜೆಪಿಯವರೇ ಹೊಣೆ. ಆರೆಸೆಸ್ಸ್ ನಾಯಕರು ಮೋದಿ ಕಿವಿ ಹಿಂಡಿದ್ದರೆ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರಲಿಲ್ಲ ಎಂದರು.
ಭವಿಷ್ಯದಲ್ಲಿ ಸಂಕಷ್ಟ: ಕೇಂದ್ರ ಸರಕಾರ ಆರ್ಥಿಕತೆ ಸುಧಾರಣೆಗೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಆರ್ಥಿಕತೆಗೆ ಹಿನ್ನಡೆಯಾಗಲಿದೆ ಎಂದು ಬಿಜೆಪಿಯ ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ ಎಂದು ಉಗ್ರಪ್ಪ ಉಲ್ಲೇಖಿಸಿದರು.
ರಕ್ಷಣಾ ವೆಚ್ಚವನ್ನೂ ಕಡಿತ ಮಾಡಿದ್ದು, 1 ಲಕ್ಷ ಕೋಟಿ ರೂ.ಅನುದಾನ ಕಡಿತ ಮಾಡಿದ್ದಾರೆ. ದೇಶದಲ್ಲಿ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ. ಇದನ್ನು ಮರೆಮಾಚಲು ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಯೋಜನೆ ಜಾರಿಗೆ ಬಿಜೆಪಿ ಮುಂದಾಗಿದೆ ಎಂದು ಟೀಕಿಸಿದರು.