ವಿದ್ಯುತ್ ಪೂರೈಕೆಯಲ್ಲಿ ವಿಳಂಬ ಆರೋಪ: ಹೆಸ್ಕಾಂ ಎದುರು ಆತ್ಮಹತ್ಯೆಗೆ ಯತ್ನಿಸಿದ ರೈತ

Update: 2019-12-27 16:34 GMT

ಹಾವೇರಿ, ಡಿ.27: ಕೃಷಿ ಚಟುವಟಿಕೆಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದ ರೈತರೊಬ್ಬರು ಶುಕ್ರವಾರ ವಿದ್ಯುತ್ ಕಚೇರಿಯ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ನಗರದಲ್ಲಿ ನಡೆದಿದೆ. 

ಹಾವೇರಿ ಜಿಲ್ಲೆಯ ಕುರಬಗೊಂಡ ಗ್ರಾಮದ ಭರಮಗೌಡ ರಾಯಣ್ಣನವರ ಆತ್ಮಹತ್ಯೆಗೆ ಯತ್ನಿಸಿದ ರೈತ. ಏಕಾಏಕಿ ಹಾವೇರಿ ಜಿಲ್ಲೆಯ ಹೆಸ್ಕಾಂ ಕಚೇರಿಗೆ ಆಗಮಿಸಿದ ಭರಮಗೌಡ, ಕಡಿಮೆ ವಿದ್ಯುತ್ ಪೂರೈಸುವ ಟಿಸಿ ಅಳವಡಿಸುವ ಮೂಲಕ ಅಧಿಕಾರಿಗಳು ನಮ್ಮ ಬೆಳೆ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ತನ್ನ ಬೈಕಿನಿಂದ ಪೆಟ್ರೋಲ್ ತೆಗೆದು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಪ್ರಕಾಶ್ ರೈತನ ಕೈಯಲ್ಲಿದ್ದ ಪೆಟ್ರೋಲ್ ಬಾಟಲ್ ಅನ್ನು ಕಿತ್ತುಕೊಳ್ಳುವ ಮೂಲಕ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಡೆದಿದ್ದಾರೆ. ನಂತರ ಸ್ಥಳೀಯರು ಆತನನ್ನು ಸ್ಥಳದಿಂದ ಕರೆದೊಯ್ದಿದ್ದಾರೆ. ಘಟನೆ ಸಂಬಂಧ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News