‘ಸಾಮಾನ್ಯ ವರ್ಗದವರಿಗೆ ಶೇ.10ರಷ್ಟು ಮೀಸಲಾತಿ’: ಮುಖ್ಯಮಂತ್ರಿಗೆ ಸುರೇಶ್ ಕುಮಾರ್ ಪತ್ರ

Update: 2019-12-27 17:10 GMT

ಬೆಂಗಳೂರು, ಡಿ.27: ಆರ್ಥಿಕವಾಗಿ ಹಿಂದುಳಿದ ರಾಜ್ಯದ ಸಾಮಾನ್ಯ ನಾಗರಿಕರು ಶಿಕ್ಷಣ, ಉದ್ಯೋಗಗಳಲ್ಲಿ ಕೇಂದ್ರ ಸರಕಾರ ನೀಡಿದ ಮಾದರಿಯಲ್ಲಿಯೇ ಮೀಸಲಾತಿಯ ಸೌಲಭ್ಯಗಳನ್ನು ಪಡೆಯುವಂತಾದರೆ, ಸಂವಿಧಾನದ ಕರ್ತೃಗಳಿಗೆ ಬಹುದೊಡ್ಡ ಗೌರವವನ್ನು ಸಲ್ಲಿಸಿದಂತಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಕೇಂದ್ರ ಸರಕಾರದ ಮಾದರಿಯಲ್ಲಿ ರಾಜ್ಯದಲ್ಲಿ ವಾಸಿಸುವ ಆರ್ಥಿಕವಾಗಿ ದುರ್ಬಲರಾದ ಸಾಮಾನ್ಯ ನಾಗರಿಕರಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿಯ ಸೌಲಭ್ಯವನ್ನು ವಿಸ್ತರಿಸಲು ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಕೇಂದ್ರ ಸರಕಾರದ ನಿರ್ಣಯಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತಮ್ಮದೇ ಅಧಿಕಾರ ವ್ಯಾಪ್ತಿಯನ್ನು ಹೊಂದಿವೆ. ರಾಜ್ಯ ಸರಕಾರವು ಇಂತಹ ಮಹತ್ವದ ನಿರ್ಣಯವನ್ನು ರಾಜಕೀಯ ಪ್ರೇರಿತವೆಂದು ಬಿಂಬಿಸಿ ಈ ನಾಡಿನ ಆರ್ಥಿಕವಾಗಿ ಹಿಂದುಳಿದ ನಾಗರಿಕರಿಗೆ ಯಾವುದೇ ಮೀಸಲಾತಿಯ ಸೌಲಭ್ಯವನ್ನು ವಿಸ್ತರಿಸಲು ಮುಂದಾಗಲಿಲ್ಲ. ಇದರಿಂದ ಸಾಮಾನ್ಯ ವರ್ಗದ ಸಮುದಾಯಗಳಿಗೆ ಸೇರಿದ ಅರ್ಹ ನಾಗರಿಕರು ತಮ್ಮದಲ್ಲದ ತಪ್ಪಿಗೆ ಅವಕಾಶ ವಂಚಿತರಾಗುವಂತಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News