ಸಂವಿಧಾನ ಜಾಗೃತಿಗಾಗಿ ಬಿವಿಎಸ್‍ನಿಂದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

Update: 2019-12-27 17:57 GMT

ಚಿಕ್ಕಮಗಳೂರು, ಡಿ.27: ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಸಮಗ್ರ ಅಬಿವೃದ್ಧಿ ದೃಷ್ಟಿಯಿಂದ ವಿಶ್ವದಲ್ಲಿಯೇ ಮಾದರಿಯಾದ ಸಂವಿಧಾನವನ್ನು ರಚಿಸಿದ್ದಾರೆ. ಆದರೆ ಇಂತಹ ಸಂವಿಧಾನದ ಬಗ್ಗೆ ಜನಸಾಮಾನ್ಯರಿಗೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚು ಅರಿವಿಲ್ಲ. ಆದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಭಾರತದ ಸಂವಿಧಾನದ ಬಗ್ಗೆ ಅರಿವು, ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಸಂವಿಧಾನ ವಿಷಯದ ಕುರಿತಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ-2010ಅನ್ನು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾ ಸಂಯೋಜಕ ಚಿದಂಬರ್ ಎಂ.ಎನ್ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019, ನ.26ರಿಂದ-2020, ಜ.26ರವರೆಗೆ ಸಂವಿಧಾನ ಸಮರ್ಪಣ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಿವಿಎಸ್ ಸಂಘಟನೆ ವತಿಯಿಂದ ಸಂವಿಧಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. 2020ರ ಫೆ.2ರಂದು ಮೈಸೂರಿನಲ್ಲಿ ಸಂವಿಧಾನ ಜಾಗೃತಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಇದರ ಭಾಗವಾಗಿ ಶಾಲಾ ಕಾಲೇಜುಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಈ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 5 ಲಕ್ಷ ರೂ. ವರೆಗಿನ ಬಹುಮಾನಗಳನ್ನು ಘೋಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಬಂಧ ಸ್ಪರ್ಧೆಯನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ, ಸಂಶೋಧನ ವಿಭಾಗದ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ ಏರ್ಪಡಿಸಲಾಗಿದೆ.

ಈ ವಿಭಾಗದಲ್ಲಿ "ಭಾರತೀಯ ಸಮಾಜ ಪರಿವರ್ತನೆಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳ ಪಾತ್ರ" ವಿಷಯದ ಬಗ್ಗೆ ಈ ವಿಭಾಗದವರು ಪ್ರಬಂಧ ಬರೆಯಬೇಕಾಗಿದೆ. ಈ ವಿಭಾಗದಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನವಾಗಿ 5 ಲಕ್ಷ ರೂ., ಎರಡನೇ ಬಹುಮಾನವಾಗಿ 50 ಸಾವಿರ ರೂ, ಮೂರನೇ ಬಹುಮಾನವಾಗಿ 25 ಸಾವಿರ ರೂ., ಹಾಗೂ 10 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನವಾಗಿ ತಲಾ 5 ಸಾವಿರ ರೂ. ನೀಡಲಾಗುವುದು ಎಂದು ಅವರು ತಿಳಿಸಿದರು.

ಎರಡನೇ ವಿಭಾಗದಲ್ಲಿ ಪದವಿ ಪೂರ್ವ ಹಾಗೂ ತತ್ಸಮಾನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಈ ವಿಭಾಗದವರು "ಭಾರತ ಸಂವಿಧಾನದ ಪ್ರಸ್ತಾವನೆಯ ಮಹತ್ವ" ಎಂಬುದನ್ನು ಪ್ರಬಂಧದ ವಿಷಯವನ್ನಾಗಿ ನೀಡಲಾಗಿದ್ದು, ಈ ವಿಭಾಗದಲ್ಲಿ ಪ್ರಥಮ ಬಹುಮಾನ 50 ಸಾವಿರ ರೂ., ದ್ವಿತೀಯ ಬಹುಮಾನ 25 ಸಾವಿರ ರೂ., ತೃತೀಯ ಬಹುಮಾನ 15 ಸಾವಿರ ರೂ. ಹಾಗೂ 10 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನವಾಗಿ ತಲಾ 3 ಸಾವಿರ ರೂ. ನೀಡಲಾಗುವುದು ಎಂದರು.

ಮೂರನೇ ವಿಭಾಗ ಪ್ರೌಢಾಶಾಲಾ ವಿಭಾಗವಾಗಿದ್ದು, ಈ ವಿಭಾಗದಲ್ಲಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು "ಭಾರತ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಾತ್ರ" ಎಂಬ ವಿಷಯದ ಕುರಿತು ಪ್ರಬಂಧ ಬರೆಯಬೇಕಿದೆ. ಈ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 25 ಸಾವಿರ ರೂ., ದ್ವಿತೀಯ 15 ಸಾವಿರ ರೂ., ತೃತೀಯ 5 ಸಾವಿರ ರೂ. ಹಾಗೂ 10 ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರೂ. ಸಮಾಧಾನಕಾರ ಬಹುಮಾನ ನೀಡಲಾಗುವುದು ಎಂದು ಚಿದಂಬರ್ ತಿಳಿಸಿದರು.

ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲಾ ಕಾಲೇಜು, ಸ್ನಾತಕೋತ್ತರ, ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು ಪುಸ್ತಕಗಳನ್ನು ಅಧ್ಯಯನ ಮಾಡಿ, ಪರಿಣಿತರು, ಶಿಕ್ಷಕರ ಸಲಹೆ ಪಡೆದು ಪ್ರಬಂಧವನ್ನು ಬರೆಯಬಹುದು ಎಂದು ತಿಳಿಸಿರುವ ಅವರು, ಪ್ರೌಢಶಾಲಾ, ಪದವಿ ಪೂರ್ವ ಅಥವಾ ತತ್ಸಮಾನ ವಿಭಾಗದ ವಿದ್ಯಾರ್ಥಿಗಳು 1 ಸಾವಿರ ಪದಗಳಿಗೆ ಮೀರದಂತೆ ಹಾಗೂ ಪದವಿ, ಸ್ನಾತಕೋತ್ತರ, ಸಂಶೋಧನ ಅಥವಾ ತತ್ಸಮಾನ ವಿಭಾಗದವರು 2 ಸಾವಿರ ಪದಗಳನ್ನು ಮೀರದಂತೆ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧಗಳನ್ನು ಬರೆದು 2020, ಜ.10ರ ಸಂಜೆ 5ರೊಳಗೆ ಅಂಚೆ ಅಥವಾ ನಿಗದಿತ ವಿಳಾಸಕ್ಕೆ ಖುದ್ದು ತಲುಪಿಸಬೇಕು. ಪ್ರಬಂಧಗಳನ್ನು ಹೈಕೋರ್ಟ್‍ನ ವಕೀಲರು ಮೌಲ್ಯಮಾಪನ ಮಾಡಲಿದ್ದು, ಅವರ ತೀರ್ಮಾನವೇ ಅಂತಿಮ ಎಂದು ಅವರು ತಿಳಿಸಿದರು.

ಪ್ರಬಂಧಗಳನ್ನು ತಲುಪಿಸಬೇಕಾದ ವಿಳಾಸ- ಅನಿಲ್ ಆನಂದ್, ಭೂಮಿಕ ಎಂಟರ್‍ಪ್ರೈಸಸ್, 16 ಮುನ್ಸಿಪಾಲ್ ಕಾಂಪ್ಲೆಕ್ಸ್, ಆಝಾದ್ ಪಾರ್ಕ್, ಚಿಕ್ಕಮಗಳೂರು. ದೂರವಾಣಿ-08262-233880 ಅಥವಾ ವಿಜಯ್‍ಕುಮಾರ್, ಶ್ರೀ ವಿಷ್ಣು ಸ್ಟೇಷನರೀಸ್, ಡಯಟ್ ಮುಂಭಾಗ, ಬಿಸಿಎಂ ಹಾಸ್ಟೆಲ್ ಪಕ್ಕ, ರಾಮನಹಳ್ಳಿ, ಚಿಕ್ಕಮಗಳೂರು 

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರೇವಣ್ ಮೌರ್ಯ, ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ, ನಗರಾಧ್ಯಕ್ಷ ಚೇತನ್, ಸಹ ಕಾರ್ಯದರ್ಶಿ ಮನೋಜ್, ರಾಹುಲ್, ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News