ಪಂಕ್ಚರ್ ಹಾಕುವವರಿಂದಲ್ಲ, ಪಾರ್ಲಿಮೆಂಟ್‍ನಲ್ಲಿ ಕುಳಿತಿರುವವರಿಂದ ದೇಶ ಹಾಳಾಗಿದೆ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2019-12-28 11:55 GMT

ಕೊಳ್ಳೇಗಾಲ, ಡಿ.28: ಪಂಕ್ಚರ್ ಹಾಕುವವರು ಪ್ರಾಮಾಣಿಕರು. ಅವರಿಂದ ಈ ದೇಶ ಹಾಳಾಗಿಲ್ಲ. ಪಾರ್ಲಿಮೆಂಟ್‍ನಲ್ಲಿ ಕುಳಿತಿರುವವರಿಂದ ದೇಶ ಹಾಳಾಗಿದೆ ಎಂದು ಮೈಸೂರಿನ ಉರಿಲಿಂಗಪೆದ್ದಮಠ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.   

ಪಟ್ಟಣದ ಎಂ.ಜಿ.ಎಸ್.ವಿ ಕಾಲೇಜು ಮೈದಾನದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದರು.

ಎನ್.ಆರ್.ಸಿ ಜಾರಿಗೆ ಬಂದರೆ ಪೌರತ್ವವನ್ನು ಪೇಪರ್ ಅಥವಾ ದಾಖಲೆಗಳಿಂದ ಸಾಬೀತು ಪಡಿಸಬೇಡಿ, ಬದಲಾಗಿ ಡಿ.ಎನ್.ಎ. ಪರೀಕ್ಷೆ ಮೂಲಕ ಸಾಬೀತು ಪಡಿಸುವಂತೆ ಒತ್ತಾಯಿಸೋಣ. ಡಿ.ಎನ್.ಎ ಮಾಡಿಸಿದರೆ ದಲಿತರು, ಮುಸ್ಲಿಮರು ಹಾಗೂ ಹಿಂದುಳಿದ ವರ್ಗದವರು ಒಂದೇ ರಕ್ತ ಎಂಬುದು ಗೊತ್ತಾಗುತ್ತದೆ. ಇವರು ಇಲ್ಲಿನ ಮೂಲ ನಿವಾಸಿಗಳು ಎಂಬುದು ಸಾಬೀತಾಗುತ್ತದೆ. ಆದರೆ ಹೊರಗಿನವರು ಬಂದು ನಮಗೆ ಪೌರತ್ವ ಸಾಬೀತು ಮಾಡಲು ಹೇಳುತ್ತಿದ್ದಾರೆ. ಹಾಗೇನಾದರು ಸಾಬೀತು ಪಡಿಸಬೇಕಿದ್ದರೆ ಡಿಎನ್‍ಎ ಮೂಲಕ ಸಾಬೀತು ಪಡಿಸಲಿ ಎಂದು ಹೇಳಿದರು.

ಈ ಜಗತ್ತಿನಲ್ಲಿ ಎರಡು ವಿಷಯಗಳು ಅತಿ ದೊಡ್ಡ ಹೆಸರು ಮಾಡಿವೆ. ಅದರ ಪೈಕಿ ಒಂದು ಭಾರತದ 130 ಕೋಟಿ ಜನರ ಭವಿಷ್ಯ ಬರೆದಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪೆನ್ನು. ಎರಡನೆಯದು ಟಿಪ್ಪು ಸುಲ್ತಾನ್ ಅವರ ಖಡ್ಗ. ಇವೆರಡೂ ಜಗತ್ತಿನಾದ್ಯಂತ ಹೆಸರು ಮಾಡಿರುವುದು ಎಂದರು.

ಭಾರತ ದೇಶವನ್ನು ಧರ್ಮಾಧಾರಿತ ದೇಶ ಮಾಡಲು ಹೊರಟಿದ್ದಾರೆ. ಮೊದಲು ಮನುವಾದದ ಕನ್ನಡಕ ತೆಗೆಯಿರಿ. ಇದನ್ನು ಸಂವಿಧಾನ ಒಪ್ಪುವುದಿಲ್ಲ. ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಇದು ಧರ್ಮ ನಿರಪೇಕ್ಷಿತ ರಾಷ್ಟ್ರ ಎಂದು ವ್ಯಾಖ್ಯಾನಿಸಿದರು.

ಬಳಿಕ ಬೆಂಗಳೂರಿನ ಇಸಾಕ್ ಸಿಎಎ ಕಾಯ್ದೆ ಹಾಗೂ ಎನ್.ಆರ್.ಸಿ ಕುರಿತು ಸುದೀರ್ಘ ಉಪನ್ಯಾಸ ನೀಡಿದರು. ಸಾಹಿತಿ ಹಾಗೂ ಜೆಡಿಎಸ್ ಮುಖಂಡ ಮುಳ್ಳೂರು ಶಿವಮಲ್ಲು, ಮುಸ್ಲಿಂ ಧರ್ಮಗುರುಗಳಾದ ಮೌಲಾನ ಅಂಜದ್ ಖಾಸ್ಮಿ, ಮೌಲಾನ ಅಬೂಬಕರ್ ಸಿದ್ದೀಖ್, ಮೌಲಾನ ವಸೀಂ ಅಹಮದ್, ನಾಯಕ ಜನಾಂಗದ ಮುಖಂಡ ಚಿಕ್ಕಲಿಂಗಯ್ಯ, ರೈತ ಮುಖಂಡ ಗೌಡೇಗೌಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ.ಸಿದ್ದಾರೂಢ ಸ್ವಾಮೀಜಿ, ನಗರಸಭೆ ಮಾಜಿ ಅಧ್ಯಕ್ಷ ಶಾಂತರಾಜು, ಸದಸ್ಯರುಗಳಾದ ಶಂಕನಪುರ ಪ್ರಕಾಶ್, ನಾಸೀರ್ ಷರೀಫ್, ರೈತ ಮುಖಂಡರುಗಳಾದ ಶಿವರಾಂ ಹಾಗೂ ಪಿ.ನಾಗರಾಜು, ದಲಿತ ಮುಖಂಡರಾದ ಸೋಮಣ್ಣ, ಮಣಿ, ರಾಜಶೇಖರ್ ಮೂರ್ತಿ, ನಟರಾಜು(ಕಪಿಲ್), ಚಂದು, ಶೇಖರ್ ಬುದ್ಧ, ಡಿಎಸ್‍ಎಸ್. ನ ಸಿದ್ದರಾಜು, ಅಂಜುಮನ್ ಸಂಸ್ಥೆಯ ಎಲ್ಲಾ ಸದಸ್ಯರುಗಳು, ಮುಸ್ಲಿಂ ಮುಖಂಡರುಗಳು, ಯುವ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News