ಸಾಹಿತ್ಯ ಬದುಕಿನ ಹಾದಿಗೆ ಬೆಳಕಾಗಲಿ: ಲೇಖಕಿ ವೈದೇಹಿ ಆಶಯ
ಮಡಿಕೇರಿ, ಡಿ.28 : ದೀಪ ಬೆಳಕಿನ ಸಂಕೇತವಾಗಿದ್ದು, ನಮ್ಮೊಳಗೆ ಇರುವ ಬೆಳಕನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಹಿತ್ಯ, ಸಂಗೀತ, ಲಲಿತ ಕಲೆಗಳು ನಮ್ಮ ಬದುಕಿನ ಹಾದಿಗೆ ಬೆಳಕಾಗಲಿ ಎಂದು ಖ್ಯಾತ ಲೇಖಕಿ ವೈದೇಹಿ ಅವರು ಹಾರೈಸಿದ್ದಾರೆ.
ನಗರದ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಸಭಾಂಗಣದಲ್ಲಿ ಶನಿವಾರದಂದು ನಡೆದ ಕೊಡಗಿನ ಗೌರಮ್ಮ ದತ್ತಿ ನಿಧಿಯ ವಾರ್ಷಿಕ ಮಹಿಳಾ ಲೇಖಕಿ ಪ್ರಶಸಿಯನ್ನು ‘ಸುನೀತಾ ಲೋಕೇಶ್ ಸಾಗರ್’ ಅವರಿಗೆ ಪ್ರದಾನ ಮಾಡಿ ಮಾತನಾಡಿದ ಅವರು, ಕೊಡಗಿನ ಗೌರಮ್ಮ ಕೊಡಗಿಗೆ ಮಾತ್ರವಲ್ಲದೆ, ಇಡೀ ಮಹಿಳಾ ಜಗತ್ತಿಗೆ ಸೇರಿದವರಾಗಿದ್ದು, ಹೇಗೆ ಸೇಡಿಯಾಪು ಕೃಷ್ಣ ಭಟ್ಟರ ‘ನಾಗರ ಬೆತ್ತ’ ಸಣ್ಣ ಕಥಾ ಲೋಕದಲ್ಲಿ ಅತ್ಯಂತ ಶ್ರೇಷ್ಟ ಕತೆಯೆಂದು ಮಾನ್ಯವಾಗಿದೆಯೋ ಅದೇ ರಿತಿ ಕೊಡಗಿನ ಗೌರಮ್ಮ ಅವರ ‘ವಾಣಿಯ ಸಮಸ್ಯೆ’ ಸಣ್ಣ ಕಥೆ ಮಹಿಳಾ ಲೇಖಕಿಯೊಬ್ಬರ ಅತ್ಯಂತ ಶ್ರೇಷ್ಟ ಸಣ್ಣ ಕಥೆಯೆಂದು ಮಾನ್ಯವಾಗಿರುವುದನ್ನು ಅವರು ಉಲ್ಲೇಖಿಸಿದರು.
ವಾಣಿಯ ಸಮಸ್ಯೆಯ ಕಥಾ ನಾಯಕಿ ಇಂದು ತೆಗೆದುಕೊಳ್ಳುವ ನಿರ್ಧಾರಗಳು ಕಥೆಯ ತಿರುಳಾಗಿದ್ದು, ಅತ್ಯಂತ ಅನುಭವ ಮತ್ತು ಮನೋಜ್ಞ ಕಥನಗಾರಿಕೆಯಿಂದ ಕೂಡಿದೆಯೆಂದು ಅವರು ವಿಶ್ಲೇಷಿಸಿದರು.
ಕೊಡಗಿನ ಗೌರಮ್ಮ ಅವರು, ಆ ಕಾಲದಲ್ಲೆ ಅತ್ಯಂತ ಅಗ್ರ ಶ್ರೇಣಿಯ ಮಹಿಳಾ ಲೇಖಕಿಯಾಗಿ ಹೊರ ಹೊಮ್ಮಿದ್ದು, ಒಂದೊಮ್ಮೆ ಸಮಕಾಲೀನ ಸಾಹಿತ್ಯಿಕ ಪ್ರಪಂಚದಲ್ಲಿ ಅವರು ಇದ್ದಿದ್ದರೆ ಅದ್ಭುತವಾದ ಕಥಾ ಲೋಕವನ್ನು ಅವರು ಸೃಷ್ಟಿಸುತ್ತಿದ್ದುದರಲ್ಲಿ ಸಂದೇಹವಿಲ್ಲವೆಂದು ವೈದೇಹಿ ಬಣ್ಣಿಸಿದರು.
ಕೊಡಗಿನ ಗೌರಮ್ಮ ಅತ್ಯಂತ ಮುಜುಗರ, ಆತಂಕ ಮತ್ತು ಒಂದು ರೀತಿಯ ಭಯ ಮಿಶ್ರಿತ ವಾತಾವರಣದಲ್ಲಿ ಸಮಾಜವನ್ನು ನೋಡಿದವರು. ಇದು ಸಾಹಿತ್ಯಿಕ ರಚನೆಗೆ ಪ್ರೇರಣೆಯನ್ನು ಕೊಟ್ಟಿದೆ. ತಾವು ಕೂಡ ಇಂತಹ ಮುಜುಗರ, ಒಂದು ರೀತಿಯ ಆತಂಕ ಮತ್ತು ಭಯದಿಂದಲೆ ಸಾಹಿತ್ಯಿಕ ರಚನೆಗಳನ್ನು ಮಾಡಿದ್ದು, ಅದನ್ನು ಸುನೀತಾ ಲೋಕೇಶ್ ಸಾಗರ್ ಅವರ ಬರವಣಿಗೆಗಳಲ್ಲಿ ಕಂಡಿದ್ದೇನೆ ಎಂದು ಪ್ರಶಂಸಿಸಿದ ವೈದೇಹಿ ಅವರು, ಸುನೀತಾ ಶಿಕ್ಷಕಿಯಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ಹೆಚ್ಚು ಗಮನ ಹರಿಸುವ ಮೂಲಕ ಹೆಸರು ಮಾಡಲಿ ಎಂದು ಕಿವಿ ಮಾತು ಹೇಳಿದರು.
ಸಾಹಿತ್ಯ ಏಕೆ ಬೇಕು ಎನ್ನುವುದು ಪ್ರತಿ ಸಾಹಿತ್ಯಿಕ ಸಭೆ ಸಮಾರಂಭಗಳಲ್ಲಿ, ವಿಚಾರ ಕಮ್ಮಟಗಳಲ್ಲಿ ಎದುರಾಗುವ ಪ್ರಶ್ನೆ. ಜೊತೆಗೆ ಕೊಡಗಿನಲ್ಲಿ ಸಾಹಿತ್ಯಿಕ ವಾತಾವರಣ ಶುಷ್ಕವಾಗಿದೆ ಎಂಬ ಮಾತು ಕೂಡ ಇದೆ. ಆದರೆ, ಇದಕ್ಕೆ ಅವರವರ ನೆಲೆಯಲ್ಲಿ ಪ್ರಾದೇಶಿಕ ಗುಣ ಸ್ವಭಾವಗಳ ಹಿನ್ನೆಲೆಯಲ್ಲಿ ಉತ್ತರವನ್ನು ಕಂಡುಕೊಳ್ಳಬೇಕೆಂದು ಅವರು ಹೇಳಿದರು.
ಕೊಡಗಿನಿಂದ ಬಂದಷ್ಟು ಸೈನಿಕರು ಮತ್ತು ಕ್ರೀಡಾಪಟುಗಳು ಉಳಿದ ಕಡೆಗಳಲ್ಲಿ ಯಾಕೆ ಬಂದಿಲ್ಲ ಎನ್ನುವ ಪ್ರಶ್ನೆಯ ರೀತಿಯಲ್ಲೆ ಇದು ಕೂಡ ಎಂದು ತಾವು ಭಾವಿಸುವುದಾಗಿ ವೈದೇಹಿ ವ್ಯಾಖ್ಯಾನಿಸಿದರು.
ಗೌರಮ್ಮ ನೆನಪಿನಲ್ಲಿ ಕಾರ್ಯಕ್ರಮಗಳ ಜೊತೆಗೆ ವಯಸ್ಕರಿಗೆ ಮತ್ತು ವಿಶೇಷವಾಗಿ ಮಕ್ಕಳಿಗೆ ಕಥಾ ಕಮ್ಮಟ ಮತ್ತು ಸಾಹಿತ್ಯ ಕಾರ್ಯಾಗಾರಗಳನ್ನು ಏರ್ಪಡಿಸುವಂತೆ ಸಲಹೆ ನೀಡಿದ ಅವರು, ಮನುಷ್ಯನಿಗೆ ವಿದ್ಯೆ, ಉದ್ಯೋಗ ಮತ್ತು ದುಡ್ಡು ಮುಖ್ಯವಾಗಿದ್ದು, ಕೊನೆಯಲ್ಲಿ ಹಣದಿಂದ ಏನೂ ಪಡೆಯಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಉಂಟಾದ ಸಂದರ್ಭ ಅವರ ಸಾಂತ್ವನಕ್ಕೆ ಬರುವ ಮಾಧ್ಯಮ ಸಾಹಿತ್ಯ, ಸಂಗೀತ ಮತ್ತು ಲಲಿತಕಲೆಗಳೆಂದು ಅವರು ಅನಿಸಿಕೆ ವ್ಯಕ್ತಪಡಿಸಿದರು.
ಮಾತೃಭಾಷೆಯಲ್ಲಿ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನು ನೀಡಬೇಕೆಂದು ಪ್ರತಿಪಾದಿಸಿದ ಅವರು, ಜಗತ್ತು ಅಭಿವೃದ್ಧಿಯ ಹೆಸರಿನಲ್ಲಿ ಸ್ಮಶಾನವಾಗುತ್ತಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರಲ್ಲದೆ, ಈ ರೀತಿಯ ಅಸಹಜ ಮತ್ತು ಬದುಕಿಗೆ ಪೂರಕವಾಗದ ಅಭಿವೃದ್ಧಿ ಕಾಮಗಾರಿಗಳ ಕುರಿತು ನಾವೆಲ್ಲರು ಚಿಂತಿಸಬೇಕಾಗಿದೆಯೆಂದು ವೈದೇಹಿ ಕರೆ ನೀಡಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಿಕಟ ಪೂರ್ವ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿದ, ಕೊಡಗಿನ ಗೌರಮ್ಮ ಪ್ರಶಸ್ತಿ ಸ್ಥಾಪನೆಯ ಸಂದರ್ಭ ಮಹಿಳಾ ಲೇಖಕಿಯರ ಕೊರತೆ ನಮ್ಮನ್ನು ಕಾಡಿತ್ತು. ಮೊದಲ ಪ್ರಶಸ್ತಿಗೆ ಭಾಜನರಾದ ನಯನಾ ಕಶ್ಯಪ್ ಅವರು ವೈದೇಹಿಯವರ ಸುಪುತ್ರಿಯಾಗಿದ್ದು, ಇದೀಗ ಮಹಿಳಾ ಲೇಖಕಿಯರ ನಡುವೆ ಕೊಡಗಿನ ಗೌರಮ್ಮ ಪ್ರಶಸ್ತಿಗೆ ಪೈಪೋಟಿ ಕಂಡು ಬಂದಿರುವುದು ಹೆಮ್ಮೆಯ ವಿಚಾರವೆಂದು ಅವರು ನುಡಿದರು.
ಕೊಡಗಿನಲ್ಲಿ ಸಾಹಿತ್ಯ ಪರವಾದ ಚಟುವಟಿಕೆಗಳು ಕ್ಷೀಣ ಎಂಬ ಅಪವಾದವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಿಲ್ಲಾ ಕಸಾಪ ಚುಕ್ಕಾಣಿಯನ್ನು ತಾವು ತೆಗೆದುಕೊಂಡು 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡ ಒಂದು ಐತಿಹಾಸಿಕ ಘಟನೆಯನ್ನಾಗಿ ರೂಪಿಸಿದ ಹೆಮ್ಮೆ ಕೊಡಗಿನ ಜನರದ್ದಾಗಿದೆಯೆಂದು ಅವರು ತಿಳಿಸಿದರು.
ಕೊಡಗಿನ ಗೌರಮ್ಮ ದತ್ತಿ ನಿಧಿ ಮತ್ತು ಪ್ರಶಸ್ತಿ ಸ್ಥಾಪನೆಗೆ ಅವರ ಪುತ್ರ ಬಿ.ಜಿ. ವಸಂತ್ ಅವರು ನೀಡಿದ ಸಹಕಾರ ಮತ್ತು ಪ್ರೋತ್ಸಾಹಗಳ ಬಗ್ಗೆ ಟಿ.ಪಿ.ರಮೇಶ್ ಅವರು ಮುಕ್ತ ಕಂಠದಿಂದ ಸ್ವಾಗತಿಸಿದರು. 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉದಯೋನ್ಮುಖ ಲೇಖಕರ 25 ಪುಸ್ತಕಗಳು ಪ್ರಕಟವಾಗುವ ಸಂದರ್ಭದಲ್ಲಿ 12 ಮಂದಿ ಮಹಿಳಾ ಲೇಖಕಿಯರು ಇರುವುದನ್ನು ಅವರು ಉಲ್ಲೇಖಿಸಿದರು.
ಕೊಡಗಿನ ಗೌರಮ್ಮ ಅವರ ಬಗ್ಗೆ ಸಮಗ್ರ ವ್ಯಕ್ತಿತ್ವವನ್ನು ಪರಿಚಯಿಸಿದ ರಮೇಶ್, 8 ವರ್ಷಗಳ ಅವಧಿಯಲ್ಲಿ ಗೌರಮ್ಮ ಅವರ ಸಾಹಿತ್ಯ ಕೃಷಿ ಮತ್ತು ಮಹಾತ್ಮಾ ಗಾಂಧೀಜಿಯವರ ಭೇಟಿ ಹಾಗೂ ತಮ್ಮ ಚಿನ್ನಾಭರಣಗಳನ್ನು ಗಾಂಧೀಜಿಯವರಿಗೆ ದಾನ ಮಾಡಿದ್ದನ್ನು ರಮೇಶ್ ಉಲ್ಲೇಖಿಸಿದರು.
ಶಕ್ತಿ ಸಂಪಾದಕ ಜಿ. ಚಿದ್ವಿಲಾಸ್ ಅವರು ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯ ಪರ ಚಟುವಟಿಕೆಗಳನ್ನು ನಮ್ಮ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಮಾಧ್ಯಮಗಳು ಕನ್ನಡ ಪರ ಸಂಘ ಸಂಸ್ಥೆಗಳು ಹಾಗೂ ಸಾಹಿತ್ಯ ಪರಿಷತ್ತು ಜಂಟಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರೋತ್ಸಾಹಿಸಿ ಬೆಳೆಸಬೇಕಾಗಿದೆಯೆಂದು ಅವರು ಕಿವಿ ಮಾತು ಹೇಳಿದರಲ್ಲದೆ, ಕೊಡಗಿನ ಮಾಧ್ಯಮದ ಅನೇಕ ಪತ್ರಕರ್ತರು ಸಾಹಿತಿಗಳಾಗಿ ಮಾರ್ಪಾಡಾಗಿದ್ದು, ಪುಸ್ತಕಗಳನ್ನು ಬರೆಯುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯೆಂದು ಅವರು ಹೇಳಿದರು.
ತಮ್ಮ ತಂದೆ ಗೋಪಾಲ ಕೃಷ್ಣ ಮತ್ತು ಯದುರ್ಕಳ ಶಂಕರ ನಾರಾಯಣ ಭಟ್ ಅವರು ಸಾಹಿತ್ಯಿಕ ಪ್ರೀತಿಯ ಹಿನ್ನೆಲೆಯಲ್ಲಿ ಪುಸ್ತಕಗಳನ್ನು ಬರೆದರು. ಆದರ, ಮಾರುಕಟ್ಟೆಯನ್ನು ಪ್ರವೇಶಿಸಿದ ಸಂದರ್ಭ ಓದುವವರು ಮತ್ತು ಕೊಳ್ಳುವವರು ಇಲ್ಲೆ ಪುಸ್ತಕ ಮಾರಾಟ ಹಿನ್ನಡೆ ಕಂಡಿದ್ದನ್ನು ಅವರು ಉಲ್ಲೇಖಿಸಿದರು. ಸಮಾಜದ ಆಗು ಹೋಗುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಮತ್ತು ಪಾರದರ್ಶಕ ಹಿನ್ನೆಲೆಯಲ್ಲಿ ಮಾಡಿದ ತೃಪ್ತಿ ನನಗಿರಬೇಕು. ಒಂದಲ್ಲ ಒಂದು ದಿನ ನಮ್ಮ ನಿಸ್ವಾರ್ಥ ಮತ್ತು ಪ್ರಾಮಾಣಿಕ ಕೆಲಸಗಳಿಗೆ ಮಾನ್ಯತೆ ದೊರಕುತ್ತದೆ ಎಂಬುದನ್ನು ನಾವು ಮರೆಯಬಾರದು ಎಂದು ಚಿದ್ವಿಲಾಸ್ ಕಿವಿಮಾತು ಹೇಳಿದರು.
ಪ್ರಶಸ್ತಿ ಪುರಸ್ಕೃತರಾದ ಸುನೀತಾ ಲೋಕೇಶ್ ಸಾಗರ್ ಮಾತನಾಡಿ, ಕೊಡಗಿನ ಗೌರಮ್ಮ ಪ್ರಶಸ್ತಿಯನ್ನು ಪಡೆಯುವ ಕನಸು ಇಂದು ನನಸಾಗಿದೆ. ನನಗೆ ತೋಚಿದ್ದನ್ನು ಗೀಚುವ ಬರಹದ ಗೀಳು ನನ್ನನ್ನು ಇಲ್ಲಿ ನಿಲ್ಲಿಸಿದೆ. ಹಸಿವು, ಬಡತನ, ಸೋಲು ಮತ್ತು ಹತಾಶೆಗಳನ್ನು ನನ್ನ ಬಾಲ್ಯದಲ್ಲೆ ನಾನು ಕಂಡುಕೊಂಡಿದ್ದು, ನನ್ನ ಬಾಲ್ಯ ನನಗೆ ವಿಶ್ವ ವಿದ್ಯಾಲಯವಾದ ಹಿನ್ನೆಲೆಯಲ್ಲಿ ಸಾಹಿತ್ಯ ರಚನೆ ನನ್ನನ್ನು ನಾನು ಕಂಡುಕೊಳ್ಳುವ ಮಾಧ್ಯಮವಾಯಿತೆಂದು ಹೇಳಿದ ಸುನೀತಾ ಅವರು, ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಕೊಡಗಿನಲ್ಲಿ ಪ್ರಕಟವಾಗುತ್ತಿರುವ ಕೃತಿಗಳ ಕುರಿತು ವಿಮರ್ಶೆ ಮತ್ತು ಚರ್ಚೆ ನಡೆಯುವ ಮೂಲಕ ಹೆಚ್ಚು ಹೆಚ್ಚು ಪ್ರತಿಭಾನ್ವೇಷಣೆ ಮಾಡಬೇಕೆಂದು ಅವರು ನುಡಿದರು.
ತಮ್ಮ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಕೊಡಗಿನ ಮಾಧ್ಯಮ ಲೋಕವನ್ನು ಸ್ಮರಿಸಿದ ಅವರು, ಇತ್ತೀಚೆಗೆ ಖ್ಯಾತ ಲೇಖಕಿ ವೈದೇಹಿ ಅವರೊಂದಿಗೆ ಕಳೆದ ಒಂದು ದಿನದ ಸಾಹಿತ್ಯಿಕ ಸಂವಾದದ ಕುರಿತು ತಮ್ಮ ಅನುಭವಗಳನ್ನು ಹೇಳಿಕೊಂಡರು.
ಇದೇ ಸಂದರ್ಭ ಕೊಡಗಿನ ಗೌರಮ್ಮ ನೆನಪಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಸಣ್ಣ ಕಥಾ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಕೆ. ಸಂಜನಾ, ಕೆ.ಎಸ್. ಪ್ರಗತಿ ಹಾಗೂ ಬಿ.ಎಂ. ದರ್ಶನ್ ಅವರಿಗೆ ಗಣ್ಯರು ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಪರಮೇಶ್, ಮೆಹತ್ ಫಾತಿಮಾ ಅವರುಗಳು ಗೀತ ಗಾಯನ ನಡೆಸಿಕೊಟ್ಟರು.
ವೇದಿಕೆಯಲ್ಲಿ ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಕುಶಾಲನಗರ ಹೋಬಳಿ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಕಿಗ್ಗಾಲು ಗಿರೀಶ್, ಡಾ. ಕೋರನ ಸರಸ್ವತಿ, ಎಸ್.ಐ. ಮುನೀರ್ ಅಹಮ್ಮದ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕಿ ಸುನೀತಾ ಅವರ ಕುರಿತು ಸ್ಮಿತಾ ಅಮೃತರಾಜ್ ಅವರು ಪರಿಚಯಾತ್ಮಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಮೊದಲಿಗೆ ಭಾರತಿ ಪ್ರಶಾಂತ್ ಅವರು ಪ್ರಾರ್ಥಿಸಿ, ಕೆ.ಎಸ್. ರಮೇಶ್ ಸ್ವಾಗತಿಸಿದರು. ನಾಗೇಶ್ ಉರಾಳ ಕಾರ್ಯಕ್ರಮ ನಿರೂಪಿಸಿದರು.