×
Ad

‘ಪಠ್ಯಪುಸ್ತಕಗಳನ್ನು ನಿರ್ದಿಷ್ಟ ಮಾರಾಟಗಾರರಿಂದಲೇ ಖರೀದಿಸುವಂತೆ ಒತ್ತಾಯಿಸುವಂತಿಲ್ಲ’

Update: 2019-12-28 19:49 IST

ಬೆಂಗಳೂರು, ಡಿ.28: ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆಗಳು ಮತ್ತು ಕೇಂದ್ರ ಪಠ್ಯ ಕ್ರಮ ಬೋಧನೆ ಮಾಡುತ್ತಿರುವ ಶಾಲೆಗಳು ನಿರ್ದಿಷ್ಟ ಮಾರಾಟಗಾರರ ಮೂಲಕ ಪಠ್ಯಪುಸ್ತಕ, ನೋಟ್ ಪುಸ್ತಕಗಳನ್ನು, ಸಮವಸ್ತ್ರಗಳನ್ನು ಮತ್ತು ಇತರೆ ಲೇಖನ ಸಾಮಗ್ರಿಗಳನ್ನು ಖರೀದಿಸುವಂತೆ ಪಾಲಕರಿಗೆ ಒತ್ತಾಯಿಸುವುದನ್ನು ಅಥವಾ ಅವುಗಳನ್ನು ಶಾಲೆಯಿಂದಲೇ ಪಡೆಯುವಂತೆ ಒತ್ತಾಯಿಸುವುದನ್ನು ನಿರ್ಬಂಧಿಸಿ ಆದೇಶಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.

ಪ್ರತಿ ತರಗತಿಗೆ ನಿಗದಿಪಡಿಸಿರುವಂತಹ ನೋಟ್ ಪುಸ್ತಕ, ಸಮವಸ್ತ್ರಗಳು ಹಾಗೂ ಇತರೆ ಲೇಖನ ಸಾಮಗ್ರಿಗಳನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಪೋಷಕರು ಸ್ವತಂತ್ರರಾಗಿದ್ದು, ಈ ಬಗ್ಗೆ ಉಲ್ಲೇಖ(5)ದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ. ಹೈಕೋರ್ಟ್ ಕೂಡ ಪೋಷಕರು ಮಕ್ಕಳಿಗೆ ತಮಗೆ ಇಷ್ಟವಾದ ಅಂಗಡಿಯಲ್ಲಿ ಪಠ್ಯಪುಸ್ತಕಗಳನ್ನು ಖರೀದಿಸಬಹುದೆಂಬ ಆದೇಶವನ್ನು ನೀಡಿದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈಗಾಗಲೇ ಇಂಥ ಕೆಲವು ಶಾಲಾ ಆಡಳಿತ ಮಂಡಳಿಗಳ ಮೇಲೆ ದೂರು ದಾಖಲಿಸಿದ್ದು, ಇನ್ನು ಮುಂದೆ ರಾಜ್ಯ ಪಠ್ಯಕ್ರಮ ಬೋಧಿಸುವ ಶಾಲೆಗಳು ಇಲಾಖೆಯು ನಿಗದಿಪಡಿಸಿರುವ ಪಠ್ಯಕ್ರಮವನ್ನೇ ಬೋಧಿಸತಕ್ಕದ್ದು, ಕೇಂದ್ರ ಪಠ್ಯಕ್ರಮದ ಶಾಲೆಗಳು ಸಿಬಿಎಸ್‌ಇ, ಎನ್‌ಸಿಇಆರ್‌ಟಿ ನಿಗದಿಪಡಿಸಿರುವ ಪಠ್ಯಕ್ರಮಗಳನ್ನೆ ಬೋಧಿಸುವುದು.

ಅನಧಿಕೃತ ಪಠ್ಯಕ್ರಮ ಬೋಧನೆಗೆ ಅವಕಾಶವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಪರೋಕ್ಷವಾಗಿ ಸಹಕಾರ ನೀಡುತ್ತಿರುವುದನ್ನು ಸಹ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇನ್ನು ಮುಂದೆ ಇಂಥ ದೂರುಗಳು ಬಂದಲ್ಲಿ ಆಯಾ ಶಾಲಾ ಆಡಳಿತ ಮಂಡಳಿ/ಮುಖ್ಯಸ್ಥರು ಹಾಗೂ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News