ರಾಜಕೀಯ ಉದ್ದೇಶದಿಂದ ಏಸು ಪ್ರತಿಮೆ ನಿರ್ಮಾಣ: ಸಚಿವ ಸಿ.ಟಿ.ರವಿ

Update: 2019-12-28 15:55 GMT

ಬೆಂಗಳೂರು, ಡಿ.28: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ರಾಜಕೀಯ ಉದ್ದೇಶದಿಂದ ಏಸು ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಇಂದಿಲ್ಲಿ ಆಪಾದಿಸಿದ್ದಾರೆ.

ಶನಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ಕಾರ್ಯಾಗಾರದ ಉದ್ಘಾಟನೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಪಕ್ಷದಲ್ಲಿರುವ ಮೇಲಿನವರ ಕೃಪಾಕಟಾಕ್ಷಕ್ಕಾಗಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಹೇಳೀದರು.

ವಿಷಯ ವಿವಾದವಾದರೆ ಹೆಚ್ಚು ಸುದ್ದಿಯಾಗುತ್ತದೆ ಎಂಬ ಉದ್ದೇಶದಿಂದ ಪ್ರತಿಮೆ ನಿರ್ಮಿಸಲು ಮಾಜಿ ಸಚಿವರು ಮುಂದಾಗಿದ್ದಾರೆ. ರಾಜಕೀಯವಾಗಿ ವಿರೋಧ ಮಾಡಿದರೆ ಅದು ಅವರಿಗೇ ಲಾಭವಾಗುತ್ತದೆ. ಅವರವರ ಭಾವಕ್ಕೆ, ಭಕ್ತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ಡಿಕೆಶಿ ಬುದ್ಧಿವಂತರು. ವಿರೋಧ ಮಾಡಿದಷ್ಟು ಲಾಭವಾಗುತ್ತದೆ ಎಂದು ಚೆನ್ನಾಗಿ ಅರಿತಿದ್ದಾರೆ. ಅದಕ್ಕಾಗಿ ಪ್ರತಿಮೆ ನಿರ್ಮಿಸಲು ಶಂಕುಸ್ಥಾಪನೆಗೆ ಮುಂದಾಗಿದ್ದಾರೆ ಎಂದರು.

ರಾಜಕೀಯ ಲಾಭಕ್ಕೆ ಯಾವ ದೇವರನ್ನು ಪ್ರತಿಸ್ಥಾಪಿಸಬೇಕು ಎಂಬುದು ಅವರಿಗೆ ಕರಗತವಾಗಿದೆ. ಪ್ರತಿಮೆ ನಿರ್ಮಾಣದ ವಿಚಾರದಲ್ಲಿ ನಿಯಮ ಉಲ್ಲಂಘನೆಯಾಗಿದ್ದರೆ ನಮ್ಮ ಸರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿಮೆ ನಿರ್ಮಾಣ ವಿಚಾರವನ್ನು ಸ್ಥಳೀಯರ ಜನರಿಗೆ ಬಿಡಬೇಕು. ರಾಜಕಾರಣ ಮಾಡುವುದು, ವಿರೋಧಿಸುವುದು ಮಾಡಬಾರದು ಎಂದು ಅವರು ಹೇಳಿದರು.

ಡಿ.ಕೆ.ಶಿವಕುಮಾರ್‌ಗೆ ಚೆನ್ನಾಗಿ ತಿಳಿದಿದೆ ಜೈಲಿಗೆ ಹೋಗುವ ಮುನ್ನ ಯಾವ ದೇವಸ್ಥಾನಕ್ಕೆ ಹೋಗಬೇಕು. ಜೈಲಿನಿಂದ ಬಂದ ಮೇಲೆ ಯಾವ ದೇವಸ್ಥಾನಕ್ಕೆ ಹೋಗಬೇಕು ಎಂಬುದು ತಿಳಿದಿದೆ ಎಂದ ಅವರು, ಇಸ್ಕಾನ್ ವತಿಯಿಂದ ಥೀಮ್ ಪಾರ್ಕ್ ನಿರ್ಮಾಣದ ವೇಳೆ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದರು. ಅದರ ಬಗ್ಗೆ ಸಂಶಯವಿದೆ ಎಂದು ನುಡಿದರು.

'ಕ್ರಿಮಿನಲ್‌ಗಳಿಗೆ ಪರಿಹಾರ ಸಲ್ಲ': ಮಂಗಳೂರಿನಲ್ಲಿ ಎನ್‌ಆರ್‌ಸಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಪಶ್ಚಿಮ ಬಂಗಾಳದ ನಿಯೋಗ ಪರಿಹಾರ ನೀಡುತ್ತಿರುವುದು ಸರಿಯಿದೆ. ಆದರೆ, ಕ್ರಿಮಿನಲ್‌ಗಳಿಗೆ ಪರಿಹಾರ ನೀಡುವುದು ಬೇಡ. ಎಲ್ಲವನ್ನೂ ವೋಟ್ ಬ್ಯಾಂಕ್ ದೃಷ್ಟಿಯಿಂದ ನೋಡುತ್ತಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಕ್ಕೆ ಸರಿಯಾದ ಸಕಾರಣವೇ ಇಲ್ಲ ಎಂದು ಅವರು ಹೇಳಿದರು.

'ನಾಮಫಲಕಕ್ಕೆ ಅಗ್ರಸ್ಥಾನ ಕಡ್ಡಾಯ': ರಾಜ್ಯದಲ್ಲಿನ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ದೊರೆಯಬೇಕು. ಈ ವಿಷಯದಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಲಾಗುವುದು. ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು. ಅನಂತರ ಉಳಿದ ಭಾಷೆಗಳಿಗೂ ಪ್ರಾಶಸ್ತ್ಯ ನೀಡಲಿ ಎಂದು ಅವರು ತಿಳಿಸಿದರು.

'ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ': ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ಸಿಗಬೇಕು. ಶಿಕ್ಷಣದ ಮಾಧ್ಯಮ ಕುರಿತಂತೆ ನ್ಯಾಯಾಲಯ ನೀಡಿರುವ ತೀರ್ಪಿನ ಪುನರ್‌ಅವಲೋಕನ ಅಗತ್ಯವಿದೆ. ಮತ್ತೆ ನ್ಯಾಯಾಲಯದ ಮೊರೆ ಹೋಗುವ ಅಗತ್ಯವಿದೆ. ಈ ಸಂಬಂಧ ವಿವಿಧ ರಾಜ್ಯಗಳ ಜತೆ ಸಮಾಲೋಚನೆ ಮಾಡಲಾಗುತ್ತದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News