ಏಕರೂಪದ ಮಾದರಿ ನೀತಿ ಶೀಘ್ರವೇ ಜಾರಿ: ಜಗದೀಶ್ ಶೆಟ್ಟರ್

Update: 2019-12-28 17:00 GMT

ಧಾರವಾಡ, ಡಿ.28: ವಿವಿಧ ರೀತಿಯ ಕೈಗಾರಿಕೆಗಳಿಂದ ಗ್ರಾಮ ಪಂಚಾಯತಿಗಳು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ತೆರಿಗೆ ಕುರಿತು ಏಕರೂಪತೆಯನ್ನು ತರಲು ತೆರಿಗೆ ಆಕರಣೆ ಕುರಿತು ಮಾದರಿ ನೀತಿಯನ್ನು ಶೀಘ್ರದಲ್ಲಿಯೆ ರೂಪಿಸಿ ಅನುಷ್ಠಾನಗೊಳಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಶನಿವಾರ ಧಾರವಾಡದ ಬೆಲೂರು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಂಯುಕ್ತವಾಗಿ ಆಯೋಜಿಸಿದ್ದ ಮುಮ್ಮಿಗಟ್ಟಿ ನರೇಂದ್ರ ವಸತಿ ಬಡಾವಣೆ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆ ಹಾಗೂ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮುಮ್ಮಿಗಟ್ಟಿ ನರೇಂದ್ರ ವಸತಿ ಬಡಾವಣೆಯಲ್ಲಿ ನಿಜವಾದ ಉದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ವಸತಿಗಳನ್ನು ಹಂಚಿಕೆ ಮಾಡಲಾಗುವುದು. ಯಾವುದೇ ರೀತಿಯ ಒತ್ತಡ, ಶಿಫಾರಸ್ಸುಗಳಿಗೆ ಒಳಗಾಗದೆ ಪಾರದರ್ಶಕವಾಗಿ ವಸತಿಗಳನ್ನು ನೀಡಲಾಗುವುದು. ಈ ಬಡಾವಣೆಯ ನಿರ್ಮಾಣ ಕಾಮಗಾರಿಗಳಿಗೆ ಈಗಾಗಲೆ 44 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಶೀಘ್ರದಲ್ಲಿ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗುವುದು. ಈ ನೀತಿಯಲ್ಲಿ ದ್ವಿತೀಯ ಹಂತದ ನಗರಗಳಿಗೆ ಆದ್ಯತೆ ನೀಡಿ, ಕೈಗಾರಿಕೆಗಳ ಕೇಂದ್ರಿಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಮತ್ತು ಹಿಂದುಳಿದ ಹಾಗೂ ತಾರತಮ್ಯಕ್ಕೆ ಒಳಗಾದ ಪ್ರದೇಶಗಳಿಗೆ ಪ್ರಾಮುಖ್ಯತೆ ನೀಡಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುವುದು ಜಗದೀಶ್ ಶೆಟ್ಟರ್ ತಿಳಿಸಿದರು.

ಬೆಂಗಳೂರು, ಮೈಸೂರುದಂತಹ ಮಹಾನಗರಗಳ ಹೊರತಾಗಿ ಬೆಳಗಾವಿ, ಧಾರವಾಡ, ವಿಜಯಪುರ, ದಾವಣಗೆರೆ, ಹಾವೇರಿ, ಗದಗ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗದಂತಹ ದ್ವಿತೀಯ ಹಂತದ ನಗರಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಮತ್ತು ಸ್ಥಳೀಯರಿಗೆ ಉದ್ಯೊಗಾವಕಾಶಗಳು ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಫೆ.14ರಂದು ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.

ಈಗಾಗಲೇ ಪುಣೆ, ಮುಂಬೈದಂತಹ ಮಹಾನಗರಗಳಲ್ಲಿ ರೋಡ್ ಶೋ ನಡೆಸಲಾಗಿದೆ. ಅಲ್ಲಿನ ಬೃಹತ್ ಉದ್ಯಮಿಗಳ ಜೊತೆಗೆ ಚರ್ಚಿಸಿ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಭಾಗವಹಿಸಲು ಹಾಗೂ ಅವರ ಉದ್ಯಮಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪಿಸಲು ಮನ ಒಲಿಸಲಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಕೈಗಾರಿಕೆಗಳ ಸ್ಥಾಪನೆಗೆ ಭೂಮಿಯ ಅಗತ್ಯವಿದ್ದು, ಅನೇಕ ರೈತರು ತಮ್ಮ ಜಮೀನುಗಳನ್ನು ನೀಡಿದ್ದಾರೆ. ಅವರಿಗೆ ಸರಕಾರ ಹಾಗೂ ರಾಜ್ಯದ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಜಗದೀಶ್ ಶೆಟ್ಟರ್ ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಶಾಸಕ ಅರವಿಂದ ಬೆಲ್ಲದ್ ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News