ಸಚಿವ ಸ್ಥಾನ ನೀಡಿದರೆ ನಿಭಾಯಿಸುವೆ: ಬಿ.ಸಿ.ಪಾಟೀಲ್
ಹುಬ್ಬಳ್ಳಿ, ಡಿ. 28: ಮಂತ್ರಿ ಆಗಬೇಕೆಂಬ ಆಸೆ ಎಲ್ಲರಿಗೂ ಸಹಜ. ಆದರೆ, ನಾವು ಆಸೆ ಪಟ್ಟಂತೆ ಯಾವುದೂ ಆಗುವುದಿಲ್ಲ. ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹಿರೇಕೆರೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸುವ ಜಾಯಮಾನ ನನ್ನದಲ್ಲ. ಜಾರ್ಖಂಡ್ ಚುನಾವಣಾ ಫಲಿತಾಂಶ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಂಪುಟ ಶೀಘ್ರವೇ ವಿಸ್ತರಣೆಯಾಗಲಿದ್ದು, ಸಂಪುಟ ವಿಸ್ತರಣೆಗೆ ಉಪಚುನಾವಣೆಯಲ್ಲಿ ಗೆದ್ದ ಶಾಸಕರು ಒತ್ತಡ ಹಾಕುತ್ತಿದ್ದಾರೆ ಎಂದ ಅವರು, ನೂತನ ವರ್ಷಕ್ಕೆ ಸಂಪುಟ ವಿಸ್ತರಣೆ ನಿರೀಕ್ಷೆ ಇದೆ ಎಂದು ತಿಳಿಸಿದರು.
ಉಪ ಚುನಾವಣೆಯಲ್ಲಿ ಗೆದ್ದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನಿಶ್ಚಿತ. ಜತೆಗೆ ಹೊಸಕೋಟೆ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿರುವ ಮಾಜಿ ಸಚಿವ ಎಟಿಬಿ ನಾಗರಾಜ್ ಅವರೂ ಸಚಿವರಾಗಲಿದ್ದಾರೆ ಎಂದು ಬಿ.ಸಿ.ಪಾಟೀಲ್ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.
ನಾಗರಾಜ್ ಅವರನ್ನು ಸಚಿವರನ್ನಾಗಿ ಮಾಡುವುದು ಎಂದು ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದು, ಜನವರಿ ಮೊದಲ ವಾರದಲ್ಲಿ ಸಿಎಂ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದು, ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಸಾಧ್ಯತೆಗಳಿವೆ ಎಂದರು.