370ನೇ ವಿಧಿ ರದ್ದತಿ ಬಳಿಕ ಜಮ್ಮು-ಕಾಶ್ಮೀರದಲ್ಲಿ ಜನಪರ ಚಟುವಟಿಕೆಗಳನ್ನು ಹೆಚ್ಚಿಸಿದ ಸೇನೆ: ಪಿಆರ್‌ಒ

Update: 2019-12-29 13:55 GMT

ಜಮ್ಮು, ಡಿ.29: ಕೇಂದ್ರವು ಆ.5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಬಳಿಕ ಜನರಿಗೆ ನೆರವನ್ನು ಒದಗಿಸಲು ಮತ್ತು ಪ್ರದೇಶದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ಸೇನೆಯು ‘ಮಿಷನ್ ರೀಚ್ ಔಟ್ ’ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಿದೆ ಎಂದು ಜಮ್ಮುವಿನಲ್ಲಿರುವ ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್‌ಒ) ಲೆ.ಕ.ದೇವೇಂದರ್ ಆನಂದ್ ತಿಳಿಸಿದ್ದಾರೆ.

ಸವಾಲಿನ ಸ್ಥಿತಿಯಿದ್ದರೂ ಸೇನೆಯು ‘ಸದ್ಭಾವನಾ ’ಕಾರ್ಯಾಚರಣೆಯಡಿ ತನ್ನ ಜನಪರ ಚಟುವಟಿಕೆಗಳನ್ನು ಮುಂದುವರಿಸಿದೆ ಎಂದು ರವಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ತಿಳಿಸಿದರು.

ಆ.5ರಂದು 370ನೇ ವಿಧಿಯ ರದ್ದತಿಯ ಬಳಿಕ ‘ಮಿಷನ್ ರೀಚ್ ಔಟ್’ಗೆ ಚಾಲನೆ ನೀಡಿದಾಗ ಸೇನೆಯು ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿತ್ತು ಎಂದ ಅವರು,ಯಾವುದೇ ಕ್ಷೇತ್ರವಿರಲಿ,ಸೇನೆಯು ಮುಂಚೂಣಿಯಲ್ಲಿದ್ದು ಸ್ಥಳೀಯರು,ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಜನರು ತಮ್ಮ ಗುರಿಗಳನ್ನು ಸಾಧಿಸಲು ನೆರವಾಗುತ್ತಿದೆ, ಕ್ರೀಡಾ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕ್ರೀಡಾಪಟುಗಳ ಕೌಶಲ್ಯಗಳಿಗೆ ಪುಟ ನೀಡುತ್ತಿದೆ. ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ಸಮಾರಂಭಗಳನ್ನು ಹಮ್ಮಿಕೊಳ್ಳುತ್ತಿದೆ ಮತ್ತು ಜನರ ಮನೆ ಬಾಗಿಲಿಗೆ ವ್ಯೆದ್ಯಕೀಯ ನೆರವನ್ನು ಒದಗಿಸುತ್ತಿದೆ ಎಂದರು.

ನುಸುಳುಕೋರರನ್ನು ಭಾರತದೊಳಗೆ ತಳ್ಳಲು ಪಾಕಿಸ್ತಾನದ ಸೇನೆಯಿಂದ ಪದೇಪದೇ ಕದನ ಉಲ್ಲಂಘನೆಗಳಿಂದಾಗಿ ವರ್ಷವಿಡೀ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಉದ್ವಿಗ್ನತೆಯಿದ್ದು,ಸೇನೆಯು ಗಡಿಗಳಲ್ಲಿ ತನ್ನ ಕಟ್ಟೆಚ್ಚರವನ್ನು ಹೆಚ್ಚಿಸಿತ್ತು,ಆದರೆ ಜನರನ್ನು ತಲುಪುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿತ್ತು ಎಂದ ಲೆ.ಕ.ಆನಂದ,ಸೇನೆಯು ಸಾರ್ವಜನಿಕರಿಗಾಗಿ 43 ಸದ್ಭಾವನಾ ಶಾಲೆಗಳನ್ನು ನಡೆಸುತ್ತಿದ್ದು,15,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ವಿಶೇಷ ತರಬೇತಿ ಕೇಂದ್ರಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.

ಯುವಜನರಿಗೆ ಸೇನೆಯಲ್ಲಿ ಸೇರ್ಪಡೆಗೆ ಅವಕಾಶ ಒದಗಿಸಲು ಆಗಸ್ಟ್ ಬಳಿಕ ಜಮ್ಮು ಪ್ರದೇಶದ ಸಾಂಬಾ ಮತ್ತು ರಿಯಾಸಿ ಜಿಲ್ಲೆಗಳಲ್ಲಿ ಎರಡು ಬೃಹತ್ ಸೇನಾ ಭರ್ತಿ ರ್ಯಾಲಿಗಳನ್ನು ನಡೆಸಲಾಗಿದೆ. ಮಾಜಿ ಯೋಧರ ಸಮಸ್ಯೆಗಳನ್ನು ಬಗೆಹರಿಸಲು 35 ರ್ಯಾಲಿಗಳನ್ನೂ ಸೇನೆಯು ನಡೆಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News