×
Ad

ಕೊಡಗಿಗೆ ಹಲವು ಬಾರಿ ಭೇಟಿ ನೀಡಿದ್ದ ಪೇಜಾವರ ಶ್ರೀ

Update: 2019-12-29 23:13 IST

ಮಡಿಕೇರಿ, ಡಿ.29: ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ನಿಧನಕ್ಕೆ ಕೊಡಗು ಜಿಲ್ಲೆ ಕೂಡ ಕಂಬನಿ ಮಿಡಿದಿದೆ. ಕಾವೇರಿ ತವರು ಕೊಡಗು ಜಿಲ್ಲೆಯೊಂದಿಗೆ ತಮ್ಮ ಅವಿನಾಭಾವ ಸಂಬಂಧ ಹೊಂದಿದ್ದ ಅವರು, ಕೊಡಗು ಜಿಲ್ಲೆ ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂದರ್ಭ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ಕೊಡಗು ಜಿಲ್ಲೆ ಮತ್ತೆ ತನ್ನ ಗತ ವೈಭವಕ್ಕೆ ಮರಳಲಿ ಎಂದು ಉಡುಪಿ ಮಠದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದರು. ಕೊಡಗು ಜಿಲ್ಲೆಯೊಂದಿಗೆ ಪೇಜಾವರ ಶ್ರೀ ವಿಶೇಷ ಪ್ರೀತಿ ಹೊಂದಿದ್ದು, ಹಲವು ಬಾರಿ ಕಾವೇರಿಯ ತವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರು.

ಕೊಡಗು ನಂಟು: 1971ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಸಮಾವೇಶದಲ್ಲಿ ಕೊಡಗು ಜಿಲ್ಲೆಯ ಹಲವು ಪ್ರಮುಖರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಭೇಟಿಯಾದ ಕೊಡಗು ಜಿಲ್ಲೆಯ ಪ್ರಮುಖರಿಗೆ ಮಡಿಕೇರಿಯಲ್ಲಿ ಒಂದು ಸ್ವಯಂ ಸೇವಾ ಆಸ್ಪತ್ರೆಯನ್ನು ನಿರ್ಮಿಸುವಂತೆ ಪೇಜಾವರ ಶ್ರೀ ಸಲಹೆ ನೀಡಿದ್ದರು. ಅವರ ಸಲಹೆಯಿಂದ ಪ್ರಭಾವಿತರಾದ ಕೆಲವರು 1971-72ರಲ್ಲಿ ಒಂದು ಟ್ರಸ್ಟ್ ರಚಿಸಿ, ಆಸ್ಪತ್ರೆ ಕಟ್ಟಲು ಮುಂದಡಿ ಇಟ್ಟಿದ್ದರು. ಮೊದಲ ಬಾರಿಗೆ 1973ರಲ್ಲಿ ಮಡಿಕೇರಿಗೆ ಬಂದ ಸ್ವಾಮೀಜಿ, ಜಿಲ್ಲೆಯ ದಾನಿಗಳು ಆಸ್ಪತ್ರೆಯ ನಿರ್ಮಾಣಕ್ಕೆ ತಮ್ಮ ಕೈಲಾದ ಸಹಾಯ ನೀಡುವಂತೆ ಕರೆ ನೀಡಿದ್ದರು. 1973ರಲ್ಲಿ ಆಸ್ಪತ್ರೆಯ ಆವರಣದಲ್ಲಿ ಗಣಪತಿ ದೇವಾಲಯಕ್ಕೂ ಶ್ರೀ ಶಿಲಾನ್ಯಾಸ ನೆರವೇರಿಸಿದ್ದರು.

1977, ನವೆಂಬರ್ 18ರಂದು ಮಡಿಕೇರಿಗೆ ಬಂದಿದ್ದ ಸ್ವಾಮೀಜಿ ಬಸ್ ಡಿಪೊ ಹಿಂದಿನ ಪ್ರದೇಶದಲ್ಲಿ ಅಶ್ವಿನಿ ಆಸ್ಪತ್ರೆಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ, ಶುಭ ಹಾರೈಸಿದ್ದರು. 1987ರಲ್ಲಿ ಅಶ್ವಿನಿ ಆಸ್ಪತ್ರೆಯ ದಶ ಮಾನೋತ್ಸವ ಸಮಾರಂಭದ ಸಂದರ್ಭ ಆಸ್ಪತ್ರೆಯ ಟ್ರಸ್ಟಿಗಳು ಶ್ರೀಯನ್ನು ಭೇಟಿಯಾದಾಗ ದೃಷ್ಟಿ ದಾನ ಸರ್ವಶ್ರೇಷ್ಠ ದಾನವಾಗಿದ್ದು, ಆಸ್ಪತ್ರೆಯ ದಶಮಾನೋತ್ಸವವನ್ನು ಯಾವ ರೀತಿ ಆಚರಿಸಬೇಕು ಎಂಬುದರ ಕುರಿತು ಸಲಹೆ ನೀಡಿದ್ದರು. ಅವರ ಸಲಹೆಯಂತೆ ಅಶ್ವಿನಿ ಆಸ್ಪತ್ರೆ ಕಳೆದ 31 ವರ್ಷಗಳಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ನಡೆಸಿಕೊಂಡು ಬರುತ್ತಿದೆ. ಬಳಿಕ 1988ರಲ್ಲಿ ವಿಶ್ವ ಹಿಂದೂ ಪರಿಷತ್‌ನ ಕಾರ್ಯಕ್ರಮಕ್ಕೂ ಮಡಿಕೇರಿಗೆ ಬಂದಿದ್ದ ಪೇಜಾವರ ಶ್ರೀ, ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಆಶೀರ್ವಚನ ನೀಡಿದ್ದರು. 1992ರಲ್ಲಿ ಅಶ್ವಿನಿ ಆಸ್ಪತ್ರೆಯಲ್ಲಿ ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಘಟಕಕ್ಕೂ ಪೂಜೆ ನರೆವೇರಿಸುವ ಮೂಲಕ ಚಾಲನೆ ನೀಡಿದ್ದರು.

ಪೇಜಾವರ ಶ್ರೀ ಅಗಲಿಕೆ ದುಃಖ ತಂದಿದೆ. ಮಡಿಕೇರಿ ಅಶ್ವಿನಿ ಆಸ್ಪತ್ರೆ ಪೇಜಾವರ ಶ್ರೀ ಸಲಹೆಯಂತೆ 1977ರಲ್ಲಿ ಕಾರ್ಯರಂಭ ಮಾಡಿದೆ. ಅವರು ನೀಡಿದ ಮಾರ್ಗದರ್ಶನದಂತೆ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ನೂರಾರು ಬಡ ರೋಗಿಗಳಿಗೆ ದೃಷ್ಟಿ ದಾನ ನೀಡುವ ಮೂಲಕ ಹೊಸ ಬದುಕು ಕಲ್ಪಿಸಲಾಗಿದೆ ಎನ್ನುತ್ತಾರೆ ಡಾ. ಕುಲಕರ್ಣಿ.

ಪ್ರಕೃತಿ ವಿಕೋಪ: ಭಾಗಮಂಡಲಕ್ಕೆ ಭೇಟಿ
ಕೊಡಗು ಜಿಲ್ಲೆ ಸತತ 2 ವರ್ಷಗಳಿಂದ ಪ್ರಕೃತಿ ವಿಕೋಪಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ತಮ್ಮ ಅನಾರೋಗ್ಯದ ನಡುವೆಯೇ ಭಾಗಮಂಡಲ ಮತ್ತು ತಲಕಾವೇರಿಗೆ ಆಗಮಿಸಿದ್ದರು. ಭಾಗಮಂಡಲ ಭಗಂಡ ಸನ್ನಿಧಿ ಮತ್ತು ತಲಕಾವೇರಿಯ ತೀರ್ಥ ಕುಂಡಿಕೆ ಹಾಗೂ ಅಲ್ಲಿರುವ ದೇವಸ್ಥಾನಗಳಲ್ಲಿ ಪೇಜಾವರ ಶ್ರೀ ಪೂಜೆ ಸಲ್ಲಿಸಿದ್ದರು. ಪ್ರಕೃತಿ ವಿಕೋಪದಿಂದ ಅಪಾರ ಹಾನಿಯಾದ ಮಕ್ಕಂದೂರು ವ್ಯಾಪ್ತಿಯ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಿದ್ದರು. ಪ್ರಕೃತಿ ದುರಂತದಿಂದ ನೊಂದ ಕೊಡಗು ಜಿಲ್ಲೆಯ ಜನರು ಮತ್ತೆ ತಮ್ಮ ಬದುಕನ್ನು ಕಟ್ಟಿಕೊಳ್ಳಲಿ ಎಂದು ಪೇಜಾವರ ಶ್ರೀ ಹಾರೈಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News