ದೇಶಾದ್ಯಂತ ಯುವಕರ ಹೋರಾಟ, ಬಲಿದಾನಗಳನ್ನು ಪ್ರಧಾನಿ ಗೌರವಿಸಲಿ

Update: 2019-12-30 06:23 GMT

ರವಿವಾರ ಮನ್ ಕಿ ಬಾತ್‌ನಲ್ಲಿ ಮಾತನಾಡುತ್ತಾ ನರೇಂದ್ರ ಮೋದಿಯವರು, ಯುವಕರು ಅರಾಜಕತೆ, ಅಸ್ವಸ್ಥತೆ ಮತ್ತು ಅಸ್ಥಿರತೆಗಳನ್ನು ದ್ವೇಷಿಸುತ್ತಾರೆ ಎನ್ನುವ ಮೂಲಕ ದೇಶದ ಯುವಜನತೆಯನ್ನು ಶ್ಲಾಘಿಸಿದ್ದಾರೆ. ನಂಬಿದ ವ್ಯವಸ್ಥೆಗೆ ಸರಿಯಾಗಿ ಪ್ರತಿಕ್ರಿಯಿಸದೇ ಇದ್ದಾಗ ಅದನ್ನು ಪ್ರಶ್ನಿಸಿದ ಯುವಕರನ್ನು ಮೋದಿಯವರು ಮೆಚ್ಚಿದ್ದಾರೆ. ಬಹುಶಃ ನರೇಂದ್ರ ಮೋದಿಯವರು, ಸದ್ಯದ ದೇಶದ ಬೆಳವಣಿಗೆಗಳಿಗೆ ಸ್ಪಂದಿಸಿ ಈ ಹೇಳಿಕೆಯನ್ನು ನೀಡಿರುವುದಾದರೆ ನಿಜಕ್ಕೂ ಅಭಿನಂದನೀಯವಾಗಿದೆ. ಈವರೆಗೆ ತುಕ್‌ಡೇ ತುಕ್‌ಡೇ ಗ್ಯಾಂಗ್ ಮತ್ತು ನಿರ್ದಿಷ್ಟ ಬಟ್ಟೆ ಧರಿಸಿದ ಜನರು ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ವ್ಯಂಗ್ಯಮಾಡುತ್ತಿದ್ದ ಪ್ರಧಾನಿ ಮೋದಿ ಇದೀಗ ಮೊದಲ ಬಾರಿಗೆ, ಯುವಕರು ಪ್ರಶ್ನಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿಕೆ ನೀಡಿದ್ದಾರೆ. ಪೊಲೀಸರ ಲಾಠಿ, ಗುಂಡುಗಳ ಮೂಲಕ ಸುಲಭದಲ್ಲಿ ಪ್ರತಿಭಟನೆಗಳನ್ನು ದಮನ ಮಾಡಬಹುದು ಎಂಬ ಮೋದಿಯ ನಂಬಿಕೆ ಹುಸಿಯಾದ ಲಕ್ಷಣಗಳನ್ನು ಈ ಹೇಳಿಕೆ ಸ್ಪಷ್ಟ ಪಡಿಸುತ್ತದೆ. ಬೀದಿಯಲ್ಲಿ ಸಂಘಪರಿವಾರ ಕಾರ್ಯಕರ್ತರು ನಡೆಸುತ್ತಿದ್ದ ಗುಂಪುಥಳಿತಗಳ ಕುರಿತಂತೆ ಒಮ್ಮೆಯೂ ಪ್ರತಿಕ್ರಿಯಿಸದೇ ಇದ್ದ ನರೇಂದ್ರ ಮೋದಿ, ಸಿಎಎ ವಿರುದ್ಧ ವಿದ್ಯಾರ್ಥಿಗಳು ತಂಡೋಪತಂಡವಾಗಿ ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸಿದಾಗ ಅದಕ್ಕೆ ಧರ್ಮದ ಬಣ್ಣ ಹಚ್ಚಲು ಸರ್ವ ಪ್ರಯತ್ನವನ್ನೂ ಮಾಡಿದ್ದರು. ಆದರೆ ದೇಶದ ಜಾತ್ಯತೀತ ಸತ್ವ ಅವರ ಪ್ರಯತ್ನವನ್ನು ವಿಫಲಗೊಳಿಸಿತು. ಪೂರ್ವಾಗ್ರಹಗಳನ್ನು ತೊರೆದು ಮೋದಿ ಇದೀಗ ಮೊದಲ ಬಾರಿಗೆ ಯುವಕರ ಪ್ರತಿಭಟನೆಗಳನ್ನು ಧನಾತ್ಮಕವಾಗಿ ನೋಡಿ ಪ್ರತಿಕ್ರಿಯಿಸಿದಂತಿದೆ.

ಪೌರತ್ವ ನಿಷೇಧ ಕಾಯ್ದೆ ಜಾರಿಯಾದ ಕೂಡಲೇ ಅಸ್ಸಾಂ, ತ್ರಿಪುರ ಹಾಗೂ ಇನ್ನಿತರ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾದರೂ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಹಾಗೂ ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಿಂಸಾತ್ಮಕ ದಮನ ಕಾರ್ಯಾಚರಣೆಯನ್ನು ಮಾಡಿದ ನಂತರ ಪ್ರತಿರೋಧಗಳು ವೇಗಗತಿಯಲ್ಲಿ ದೇಶಾದ್ಯಂತ ಭುಗಿಲೆದ್ದಿತು. ಮಾಧ್ಯಮದ ವರದಿಗಳು ಬಯಲುಗೊಳಿಸಿರುವಂತೆ ದಿಲ್ಲಿ ಪೊಲೀಸರು ಜಾಮಿಯಾ ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲೂ ಅಶ್ರುವಾಯುವನ್ನು ಪ್ರಯೋಗಿಸಿದ್ದಲ್ಲದೆ ವಿದ್ಯಾರ್ಥಿನಿಲಯಗಳ ಮೇಲೂ ದಾಳಿ ನಡೆಸಿ ವಿದ್ಯಾರ್ಥಿಗಳ ಮೇಲೆ ರಬ್ಬರ್ ಬುಲ್ಲೆಟ್‌ಗಳನ್ನು ಪ್ರಯೋಗಿಸುವಷ್ಟು ಹಿಂಸಾಚಾರ ಎಸಗಿದರು. ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ಪೊಲೀಸರು ನಡೆಸಿದ ಹಿಂಸಾಚಾರಗಳು ಇದಕ್ಕಿಂತ ಭೀಕರವಾಗಿದ್ದವು. ವಿದ್ಯಾರ್ಥಿಗಳ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿದ್ದರೂ, ಅಲ್ಲಲ್ಲಿ ನಡೆದ ಬಿಡಿ ಹಿಂಸಾಚಾರಗಳಿಗೆ ವಿದ್ಯಾರ್ಥಿಗಳು ಕಾರಣರಲ್ಲವೆಂದು ನಂತರ ಪೊಲೀಸರೇ ಒಪ್ಪಿಕೊಂಡರೂ, ಪೊಲೀಸರು ತಮ್ಮ ಹಿಂಸಾತ್ಮಕ ದಮನವನ್ನು ಮುಂದುವರಿಸಿದರು. ವಿದ್ಯಾರ್ಥಿಗಳ ಮೇಲೆ ಮಾಡಲಾದ ಎಲ್ಲಾ ಆರೋಪಗಳು ನಿಷ್ಫಲವಾಗುವ ರೀತಿಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಕೆಚ್ಚೆದೆಯಿಂದ ಪೊಲೀಸ್ ದಮನವನ್ನು ಪ್ರತಿಭಟಿಸಿದರು. ಪೊಲೀಸ್ ಲಾಠಿಚಾರ್ಜಿಗೆ ಎದುರಾಗಿ ನಿಲ್ಲುವ ಮೂಲಕ ಜಾಮಿಯಾದ ವಿದ್ಯಾರ್ಥಿನಿಯರು ತಮ್ಮ ಹಕ್ಕುಗಳ ದಮನವನ್ನು ಸಹಿಸಲಾರೆವೆಂಬ ಸ್ಪಷ್ಟ ಸಂದೇಶವನ್ನು ಸರಕಾರಕ್ಕೆ ನೀಡಿದರು. ಈ ವಿದ್ಯಾರ್ಥಿಗಳ ಅನುಸರಣೀಯ ಧೈರ್ಯ-ಸ್ಥೈರ್ಯಗಳು ಈವರೆಗೆ ಅಷ್ಟು ರಾಜಕೀಯವಾಗಿ ಸಕ್ರಿಯವಲ್ಲದ ವಿಶ್ವವಿದ್ಯಾನಿಲಯಗಳನ್ನೂ ಒಳಗೊಂಡಂತೆ ದೇಶಾದ್ಯಂತ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿ ನೀಡಿತಲ್ಲದೆ ತಮ್ಮ ಹಕ್ಕುಗಳ ರಕ್ಷಣೆಗಾಗಿಯೂ ಮತ್ತು ಅಮಾಯಕ ನಾಗರಿಕರನ್ನು ಹೊರದಬ್ಬುವ ಕುತಂತ್ರದ ನೀತಿಗಳಾಗಿರುವ ಸಿಎಎ ಮತ್ತು ಎನ್‌ಆರ್‌ಸಿಗಳ ವಿರುದ್ಧವೂ ಬೀದಿಗೆ ಬಂದು ಹೋರಾಡುವಂತೆ ಮಾಡಿತು.

ಈ ಹೋರಾಟವನ್ನು ಅಪಮೌಲ್ಯಗೊಳಿಸಲು ಸರಕಾರಗಳು ನಿರಂತರವಾಗಿ ಎಷ್ಟೇ ಪ್ರಯತ್ನಪಟ್ಟರೂ ಇಂಥಾ ಉಜ್ವಲ ಸ್ಥೈರ್ಯದ ಹಿನ್ನೆಲೆಯಿಂದಾಗಿ, ಯಶಸ್ವಿಯಾಗಲಿಲ್ಲ. ಅತ್ಯಂತ ಹೀನಾಯದ ಸಂಗತಿಯೆಂದರೆ ಈ ಹೋರಾಟಕ್ಕೆ ಕೋಮುವಾದದ ಬಣ್ಣ ಹಚ್ಚಲು ಪ್ರಯತ್ನಿಸಿದ್ದು. ಆದರೆ ಸಿಎಎ- ಎನ್‌ಆರ್‌ಸಿಗಳ ಹಿಂದಿನ ಸಂವಿಧಾನ ವಿರೋಧಿ ಮತ್ತು ಒಡೆದು ಆಳುವ ಉದ್ದೇಶಗಳು ಎಲ್ಲಾ ವಿವೇಚನಾಶೀಲ ಮತ್ತು ಸಂವೇದನಾಶೀಲ ಮನಸ್ಸುಗಳಿಗೆ ಸ್ಪಷ್ಟವಾಗುತ್ತಿದ್ದಂತೆ ಅವರು ಇನ್ನಷ್ಟು ಸಂಘಟಿತರಾದರು. ಡಿಸೆಂಬರ್ 19ರಂದು ದೇಶಾದ್ಯಂತ ನಡೆದ ಪ್ರತಿಭಟನೆಗಳಲ್ಲಿ ಐಕ್ಯ ಮತ್ತು ಸೌಹಾರ್ದಗಳ ಮೇಲಿನ ಒತ್ತುಗಳು ಈ ದೇಶದ ಬಹುಬಗೆಯ ವೈವಿಧ್ಯತೆಗಳ ಅಭಿವ್ಯಕ್ತಿಯೂ ಆಗಿತ್ತು. ಅದು ಸಾಂವಿಧಾನಿಕ ಚೌಕಟ್ಟಿನಡಿಯಲ್ಲಿ ಸಹಬಾಳ್ವೆ ಮಾಡಬಹುದಾದ ಸಾಧ್ಯತೆಯನ್ನು ನಿಚ್ಚಳಗೊಳಿಸಿತ್ತು. ಪ್ರತಿಭಟನಾಕಾರರ ಮನಒಲಿಸುವುದಿರಲಿ ಅವರ ಜೊತೆಗೆ ಮಾತನಾಡಲೂ ಸಿದ್ಧವಿಲ್ಲದ ಸರಕಾರ ಬಲಪ್ರಯೋಗಕ್ಕೆ ಮುಂದಾಯಿತು. ಎಲ್ಲೆಡೆ 144ನೇ ಸೆಕ್ಷನ್ ಅನ್ನು ವಿಧಿಸಿದ್ದಲ್ಲದೆ ದಿಲ್ಲಿಯಲ್ಲಿ ಹಲವಾರು ಕಡೆಗಳಲ್ಲಿ ಮೆಟ್ರೋ ಮತ್ತು ಇಂಟರ್‌ನೆಟ್ ಸೇವೆಗಳನ್ನೂ ಸಹ ಬಂದ್ ಮಾಡಿತು. ಆಳುವ ತಂತ್ರದ ಭಾಗವಾಗಿ ಭೀತಿಯನ್ನು ಹುಟ್ಟಿಸುವುದೂ ಸಹ ಒಂದು ಹಂತದ ನಂತರ ಉಪಯೋಗಕ್ಕೆ ಬರುವುದಿಲ್ಲವೆಂಬುದನ್ನು ಜನರು ಪ್ರತಿಬಂಧಕ ಕಾಯ್ದೆಗಳಿದ್ದರೂ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಶಾಂತಿಯುತವಾಗಿ ಸಮಾವೇಶಗೊಳ್ಳುವುದರ ಮೂಲಕ ಸಾಬೀತು ಪಡಿಸಿದರು. ಕುತೂಹಲದಾಯಕ ಸಂಗತಿಯೆಂದರೆ ಹೋರಾಟದ ಸಂದರ್ಭದಲ್ಲಿ ಘರ್ಷಣೆ, ಹಿಂಸೆ ಅಥವಾ ಬೆಂಕಿ ಹಚ್ಚುವ ಪ್ರಕರಣಗಳೆಲ್ಲಾ ಬಿಜೆಪಿ ಆಳುತ್ತಿರುವ ರಾಜ್ಯಗಳಲ್ಲೇ ನಡೆದಿರುವುದು ಮತ್ತಷ್ಟು ಆಳವಾದ ತನಿಖೆಯ ಅಗತ್ಯವಿರುವುದನ್ನು ಸೂಚಿಸುತ್ತದೆ. ಈ ಹಿಂದೆ ಅಸ್ಸಾಮಿನಲ್ಲಿ ಪ್ರತಿಭಟನೆಯ ವೇಳೆಯಲ್ಲಿ ಐದು ಜನರು ಸಾವನ್ನಪ್ಪಿದ್ದರೆ, ಮಂಗಳೂರಿನಲ್ಲಿ ಇಬ್ಬರು ವ್ಯಕ್ತಿಗಳು ಪೊಲೀಸ್ ಗೋಲಿಬಾರಿನಲ್ಲಿ ಮೃತಪಟ್ಟಿದ್ದಾರೆ. ಸರಕಾರದ ಹಠಮಾರಿ ಧೋರಣೆಯಿಂದಲೇ ಈ ಎಲ್ಲಾ ಅಮೂಲ್ಯ ಜೀವಗಳು ನಷ್ಟವಾಗಿದ್ದು ಆಳುವವವರ ಗಂಭೀರ ನೈತಿಕ ವೈಫಲ್ಯವನ್ನು ಸೂಚಿಸುತ್ತದೆ. ಸರಕಾರವು ಶಾಂತಿಯುತ ಸಹಬಾಳ್ವೆಯನ್ನು ಖಾತರಿಗೊಳಿಸುವ ತನ್ನ ಕರ್ತವ್ಯದಲ್ಲಿ ವಿಫಲವಾದರೆ ಜನರೇ ಆ ನಿಟ್ಟಿನಲ್ಲಿ ನಾಯಕತ್ವವನ್ನು ವಹಿಸಬೇಕಾಗುತ್ತದೆ. ವಿಶಾಲ ಜನಸಮುದಾಯಗಳಲ್ಲಿ ಆಳವಾಗಿ ಬೇರುಬಿಡುತ್ತಿರುವ ನಾಗರಿಕ ಅಸಹಕಾರದ ಸ್ಫೂರ್ತಿ ಮತ್ತು ಸಾಂವಿಧಾನಿಕ ಬದ್ಧತೆಗಳು ಆ ನಿಟ್ಟಿನಲ್ಲಿ ಹೃದಯಸ್ಪರ್ಷಿಯಾಗಿದೆ. ಮೋದಿಯವರು ಹೇಳುವಂತೆ ಭರವಸೆದಾಯಕವಾಗಿದೆ. ಯುವಕರು ವ್ಯವಸ್ಥೆಯನ್ನು ಪ್ರತಿಭಟಿಸುವುದು ಶ್ಲಾಘನೀಯ ಸಂಗತಿಯೆಂದು ನರೇಂದ್ರ ಮೋದಿ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದಾದರೆ, ಆ ಪ್ರತಿಭಟನೆಗಳನ್ನು ಅಕ್ರಮ ದಾರಿಗಳ ಮೂಲಕ ದಮನಿಸಲು ಯತ್ನಿಸಿದ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮೃತಪಟ್ಟ ಎಲ್ಲ ಹೋರಾಟಗಾರರಿಗೆ ಪರಿಹಾರವನ್ನು ನೀಡಬೇಕು. ಹಾಗೆಯೇ, ಎಲ್ಲೆಲ್ಲಿ ಹಿಂಸಾಚಾರಗಳು ನಡೆದಿದೆಯೋ ಆ ಪ್ರಕರಣಗಳ ನ್ಯಾಯಾಂಗ ತನಿಖೆ ನಡೆಸಬೇಕು. ಪೊಲೀಸರ ವೈಫಲ್ಯ ಸ್ಪಷ್ಟವಾದರೆ ಆ ಪೊಲೀಸರನ್ನು ವಜಾಗೊಳಿಸಬೇಕು. ಜೊತೆಗೆ ಸಿಎಎ, ಎನ್‌ಆರ್‌ಸಿ ಕುರಿತಂತೆ ದೇಶದ ಜನರ ಆತಂಕವನ್ನು ಅರ್ಥಮಾಡಿಕೊಂಡು ಅದರಿಂದ ಹಿಂದೆ ಸರಿದು, ದೇಶದ ಅಭಿವೃದ್ಧಿಯ ಕಡೆಗೆ ತಮ್ಮ ದೃಷ್ಟಿಯನ್ನು ಹರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News