ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಹೋರಿ ದಾಳಿ: ಯುವಕ ಮೃತ್ಯು

Update: 2019-12-30 07:11 GMT

ಮುಂಡಗೋಡ: ಹೋರಿ ಹೊಡೆತಕ್ಕೆ ಯುವಕನೋರ್ವ ಬಲಿಯಾದ ಘಟನೆ ತಾಲೂಕಿನ ಇಂದೂರ ಗ್ರಾಮದಲ್ಲಿ ರವಿವಾರ ನಡೆದಿದೆ. ಶಿಗ್ಗಾಂವ ತಾಲೂಕಿನ ಬಂಕಾಪುರದ ಸುಂಕದಕೇರಿ ಗ್ರಾಮದ ಮಂಜುನಾಥ ನೊರಜಪ್ಪನವರ(26) ಮೃತಪಟ್ಟ ಯುವಕ. ಹೋರಿ ಬೆದರಿಸುವ ಕಾರ್ಯಕ್ರಮವನ್ನು ವೀಕ್ಷಿಸಲು ಬಂದಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ರೈತ ದಿನಚಾರಣೆ ಅಂಗವಾಗಿ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯನ್ನು ರವಿವಾರ ಇಂದೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೃತನು ಹೋರಿ ಬೆದರಿಸುವ ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದಾಗ ಹಿಂಬದಿಯಿಂದ ಬಂದ ಹೋರಿ ಗುದ್ದಿದ್ದು, ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಮುಂಡಗೋಡದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.  

ಅಲ್ಲದೆ ತಾಲೂಕಿನ ಸಾಲಗಾಂವ ಗ್ರಾಮದ ಮಂಜುನಾಥ ಶೇಟಪ್ಪನವರಿಗೆ ಹೋರಿಯೊಂದು ತಿವಿದಿದ್ದು, ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಿಲಾಗಿದೆ. ಪೊಲೀಸರಿಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಪರ್ಧೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯಮಟ್ಟದ ಹೋರಿ ಬೆದರಿಸುವ ಕಾರ್ಯಕ್ರಮವನ್ನು ನಡೆಸಲು ಪೊಲೀಸ್ ಇಲಾಖೆಯಿಂದಾಗಲಿ ಅಥವಾ ಇತರೆ ಇಲಾಖೆಗಳಿಂದ ಯಾವುದೇ ಅನುಮತಿ ಪಡೆದುಕೊಂಡಿಲ್ಲ ಹಾಗೂ ಕಾರ್ಯಕ್ರಮದಲ್ಲಿ ಅವಘಡ ಸಂಭವಿಸಬಾರದು ಎಂಬ ಯಾವುದೇ ಸುರಕ್ಷತಾ ಕ್ರಮವನ್ನು ಅನುಸರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಪರ್ಧೆಯ 16 ಸಂಘಟಕರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News