ಡಿ.26ರಂದೇ ಪೇಜಾವರ ಶ್ರೀ ನಿಧನ ?: ಪೊಲೀಸ್ ಆದೇಶ ಪತ್ರ ವೈರಲ್

Update: 2019-12-30 13:23 GMT

ಬೆಂಗಳೂರು, ಡಿ.30: ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಡಿ.26 ರಂದೇ ನಿಧನ ಹೊಂದಿದ್ದಾರೆಯೇ ಎಂದು ಅನುಮಾನ ವ್ಯಕ್ತವಾಗುವ ರೀತಿಯಲ್ಲಿ ಪೊಲೀಸ್ ಇಲಾಖೆಯದ್ದು ಎನ್ನಲಾದ ಆದೇಶ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಡಿ.29ರಂದು ರವಿವಾರ ಪೇಜಾವರ ಶ್ರೀ ಅವರು ಮಠದಲ್ಲಿಯೇ ನಿಧನರಾಗಿರುವುದು ಅಧಿಕೃತ ವರದಿ. ಆದರೆ, ಪೊಲೀಸ್ ಇಲಾಖೆಯದ್ದು ಎನ್ನಲಾದ ಆದೇಶ ಪತ್ರಯೊಂದರಲ್ಲಿ ಡಿ.26ರಂದೇ ಶ್ರೀಗಳು ನಿಧನರಾಗಿದ್ದು, ಇಲ್ಲಿನ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾಪೀಠ ಮಠದಲ್ಲಿ ಬಂದೋಬಸ್ತ್ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಪತ್ರದಲ್ಲಿ ಏನಿದೆ?: ಪೇಜಾವರ ಸ್ವಾಮೀಜಿಗಳು ದೈವಾಧೀನರಾಗಿವರಿಂದ ಅಂತ್ಯ ಸಂಸ್ಕಾರವನ್ನು ಸಿ.ಕೆ.ಅಚ್ಚಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಬನಶಂಕರಿ 3ನೇ ಹಂತ, ಕತ್ರಿಕುಪ್ಪೆ ಮುಖ್ಯ ರಸ್ತೆಯಲ್ಲಿರುವ ಪೂರ್ಣಪ್ರಜ್ಞಾ ವಿದ್ಯಾಪೀಠ ಆವರಣದಲ್ಲಿ ನೆರವೇರಿಸುವುದರಿಂದ ಈ ಸ್ಥಳಕ್ಕೆ ನೂರಾರು ಸ್ವಾಮೀಜಿಗಳು, ಗಣ್ಯ ವ್ಯಕ್ತಿಗಳು ಹಾಗೂ ಲಕ್ಷಾಂತರ ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಬಂದೋಬಸ್ತ್‌ಗಾಗಿ ಕೆ.ಎಸ್.ಲೇಔಟ್ ಪಿಎಸ್ಐ ಎಚ್.ಎಮ್.ನಾಗೇಶ್ ಸೇರಿದಂತೆ ನಾಲ್ವರು ಪೊಲೀಸ್ ಪೇದೆಗಳನ್ನು ನಿಯೋಜಿಸಿ, ಡಿ.26ರಂದು ಸುಬ್ರಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಎಚ್.ಮಂಜುನಾಥ್ ಬಾಬು ಆದೇಶಿಸಿರುವ ಪ್ರಕಟನೆ ಹೊರಬಂದಿದೆ ಎನ್ನಲಾಗಿದೆ.

ಡಿ.26ರ ಪೊಲೀಸ್ ಇಲಾಖೆಯದ್ದು ಎನ್ನಲಾದ ಪ್ರಕಟನೆಯನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಹಲವು ಮಂದಿ, ಸರಕಾರವೇ ಶ್ರೀಗಳ ಸಾವಿನ ಸುದ್ದಿ ಮರೆಮಾಚಿದೆ ಎಂದು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News