ಶಿವಸೇನೆಯಿಂದ ರಾಜ್ಯಗಳ ನಡುವೆ ಬೆಂಕಿ ಹಚ್ಚುವ ಕೆಲಸ: ಸಿಎಂ ಯಡಿಯೂರಪ್ಪ

Update: 2019-12-30 13:06 GMT

ಬೆಂಗಳೂರು, ಡಿ. 30: ಕರ್ನಾಟಕ ರಾಜ್ಯದ ಒಂದಿಂಚು ಜಾಗವನ್ನು ಕಬಳಿಸಲು ಯಾರೊಬ್ಬರಿಗೂ ಯಾವುದೇ ಸಂದರ್ಭದಲ್ಲಿಯೂ ಅವಕಾಶ ನೀಡುವುದಿಲ್ಲ. ಹೀಗಾಗಿ ಗಡಿಭಾಗದ ಕನ್ನಡಿಗರು ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಶಿವಸೇನೆ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಇದಕ್ಕೆ ಕರ್ನಾಟಕ ರಾಜ್ಯ ಸರಿಯಾದ ರೀತಿಯಲ್ಲಿ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಗಡಿಯಲ್ಲಿ ಶಾಂತಿ ಕಾಪಾಡಲು ಸರಕಾರ ಬದ್ಧ. ಗಡಿ ನಿಗದಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದ ಅವರು, ಬೆಳಗಾವಿ ಜಿಲ್ಲೆಯಲ್ಲಿರುವ ಯಾರೊಬ್ಬರೂ ನಾಡದ್ರೋಹದ ಕೆಲಸ ಮಾಡಬಾರದು ಎಂದು ಕೋರಿದರು.

ಗಡಿ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಸರಕಾರ ಅವಕಾಶ ನೀಡುವುದಿಲ್ಲ. ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲ ಜನರು ಸಹಕರಿಸಬೇಕೆಂದ ಅವರು, ಗಡಿ ವಿಚಾರ ಕೆದಕುವ ಮಹಾರಾಷ್ಟ್ರ ಯತ್ನಕ್ಕೆ ನಾವು ಸೊಪ್ಪು ಹಾಕುವುದಿಲ್ಲ ಎಂದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅವರ ಹೇಳಿಕೆ ಕೇವಲ ರಾಜಕೀಯಕ್ಕೆ ಸೀಮಿತವಾಗಿದೆ. ಇದಕ್ಕೆಲ್ಲ ಮಹತ್ವ ಕೊಡುವ ಅಗತ್ಯವೂ ಇಲ್ಲ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ದೇವೇಂದ್ರ ಫಡ್ನವೀಸ್ ಸಿಎಂ ಆಗಿದ್ದ ಸಂದರ್ಭದಲ್ಲಿ ಐದು ವರ್ಷ ಯಾವುದೇ ವಿವಾದವಿರಲಿಲ್ಲ. ಶಿವಸೇನೆ ಅಧಿಕಾರಕ್ಕೆ ಬಂದು ತಿಂಗಳು ಕಳೆಯುವುದರೊಳಗೆ ಉಭಯ ರಾಜ್ಯಗಳ ನಡುವೆ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದೆ. ಈ ವಿಷಯದಲ್ಲಿ ಕಾಂಗ್ರೆಸ್ ಬುದ್ಧಿ ಹೇಳಲಿ ಎಂದು ಬಿಎಸ್‌ವೈ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News