3 ತಿಂಗಳು ಕಳೆದರೂ ಯಾಕೆ ಸರಕಾರಿ ಕಾರು ಕೊಟ್ಟಿಲ್ಲ ?: ಸ್ಪೀಕರ್ ವಿರುದ್ಧ ಸಿದ್ದರಾಮಯ್ಯ ಕೆಂಡ
ಬೆಂಗಳೂರು, ಡಿ. 30: ‘ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಅವರಿಗೆ ಕಾರು ಕೊಟ್ಟಿದ್ದೀರಿ. ಆದರೆ, ನಾನು ವಿಪಕ್ಷ ನಾಯಕನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಮೂರು ತಿಂಗಳು ಕಳೆದರೂ ಏಕೆ ಇನ್ನೂ ಕಾರು ಕೊಟ್ಟಿಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ಕಾಗೇರಿ ವಿರುದ್ಧ ಕಿಡಿಕಾರಿದ್ದಾರೆ.
ವಿಪಕ್ಷ ನಾಯಕನಾಗಿರುವ ತಮಗೆ ಸರಕಾರಿ ಸವಲತ್ತು, ಸರಕಾರಿ ಕಾರು ಮತ್ತು ಸಿಬ್ಬಂದಿ ಒದಗಿಸಬೇಕೆಂದು ಎರಡು ತಿಂಗಳ ಹಿಂದೆಯೇ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೂ ಇನ್ನೂ ಸರಕಾರಿ ಕಾರು, ಸವಲತ್ತು ಒದಗಿಸಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆಂದು ಗೊತ್ತಾಗಿದೆ.
ವಿಪಕ್ಷ ನಾಯಕರಾದವರಿಗೆ ಕಾರು, ಸಿಬ್ಬಂದಿ, ಸರಕಾರಿ ನಿವಾಸ ಒದಗಿಸಿ ಕೊಡುವುದು ಸ್ಪೀಕರ್ ಕರ್ತವ್ಯ. ನಾನು ವಿಪಕ್ಷ ನಾಯಕನಾಗಿ ತಿಂಗಳುಗಳೇ ಕಳೆದಿವೆ. ಇದುವರೆಗೂ ಕಾರು ನೀಡಿಲ್ಲ, ಸಿಬ್ಬಂದಿಯೂ ಇಲ್ಲ. ಪ್ರತಿಪಕ್ಷ ನಾಯಕನಿಗೆ ವೇತನ, ಭತ್ತೆಯೂ ಇಲ್ಲ ಎಂದು ಸಿದ್ದರಾಮಯ್ಯ, ಸ್ಪೀಕರ್ ವಿರುದ್ಧ ಗುಡುಗಿದ್ದಾರೆಂದು ಹೇಳಲಾಗಿದೆ.
ಸಿಎಂ, ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ ಕೂಡಲೇ ಅವರಿಗೆ ಸರಕಾರಿ ಕಾರು ನೀಡಲಾಗಿದೆ. ಆದರೆ, ನನಗೇಕೆ ಕಾರು ನೀಡಿಲ್ಲ. ಸ್ಪೀಕರ್ ಅವರೇನು ಸರ್ವಾಧಿಕಾರಿಯೇ? ಆಡಳಿತ ಪಕ್ಷದವರಿಗೆ ಒಂದು ನ್ಯಾಯ?, ವಿಪಕ್ಷದವರಿಗೆ ಮತ್ತೊಂದು ನ್ಯಾಯವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆಂದು ತಿಳಿದು ಬಂದಿದೆ.