ಹೊಸ ವರ್ಷಾಚರಣೆ: ಕೊಡಗು ಪೊಲೀಸರಿಂದ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ
ಮಡಿಕೇರಿ, ಡಿ.30: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಕೊಡಗು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ವಾಹನ ದಟ್ಟಣೆ ಕಂಡು ಬಂದಿದೆ. ಅದರಲ್ಲೂ ಕುಶಾಲನಗರ ಮತ್ತು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
2020 ಅನ್ನು ಬರ ಮಾಡಿಕೊಳ್ಳುವ ನೆಪದಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡದಂತೆ ಪೊಲೀಸ್ ಇಲಾಖೆ ಸೂಚನೆಗಳನ್ನು ನೀಡಿದ್ದು, ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಅಗತ್ಯ ಮುಂಜಾಗೃತಾ ಕ್ರಮಗಳು ಹಾಗೂ ಬಂದೂಬಸ್ತ್ ಮಾಡಲಾಗುತ್ತಿದೆ. ಮಡಿಕೇರಿ ಕಡೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ಪ್ರವಾಸಿಗರ ಹಾಟ್ ಟೂರಿಸ್ಟ್ ಸ್ಪಾಟ್‍ಗಳಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಿಸಲಾಗಿದೆ.
ಮಾತ್ರವಲ್ಲದೆ ಹೊಸ ವರ್ಷ ಆಚರಣೆಯ ಹೆಸರಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವವರು ರಾತ್ರಿ 10 ಗಂಟೆ ಒಳಗೆ ಕಾರ್ಯಕ್ರಮಕ್ಕೆ ಬಳಸುವ ಡಿ.ಜೆ. ಸೌಂಡ್ ಸಿಸ್ಟಮ್‍ಗಳನ್ನು ಬಂದ್ ಮಾಡುವಂತೆ ಪೊಲೀಸ್ ಇಲಾಖೆ ಸೂಚಿಸಿದೆ. ಡಿಜೆ ಸೌಂಡ್ ಸಿಸ್ಟಮ್ ಮೂಲಕ ನಿಗಧಿತ ಸಮಯ ಮೀರಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದರೆ ಕ್ರಮ ಜರುಗಿಸಲಾಗುತ್ತದೆ. ಜಿಲ್ಲೆಯಾದ್ಯಂತ ಶಾಂತಿಯುತ ನೂತನ ವರ್ಷಾಚರಣೆ ಮಾಡಲು ಎಲ್ಲರೂ ಕೈಜೋಡಿಸುವಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ ಮನವಿ ಮಾಡಿದ್ದಾರೆ.
ಇನ್ನು ಅಬಕಾರಿ ಇಲಾಖೆ ಕೂಡ ಬೇಕಾಬಿಟ್ಟಿ ಮದ್ಯ ಪೂರೈಕೆಗೆ ಬ್ರೇಕ್ ಹಾಕಿದೆ. ಕಾರ್ಯಕ್ರಮಗಳನ್ನು ಆಯೋಜಿಸುವವರು ಮದ್ಯ ಪೂರೈಕೆ ಮಾಡಬೇಕಿದ್ದಲ್ಲಿ ಅಬಕಾರಿ ಇಲಾಖೆಯ ಅನುಮತಿ ಪಡೆದು, ವಿಷೇಶ ಪರವಾನಗಿಯನ್ನು ಪಡೆಯಬೇಕು ಎಂದು ಸೂಚನೆ ನೀಡಿದೆ. ಜಿಲ್ಲೆಯಲ್ಲಿ ರಾತ್ರಿ 11.30ರ ವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ಇಲಾಖೆ, 11.30ರ ಬಳಿಕ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.