×
Ad

ಅಪಘಾತಕ್ಕೀಡಾದವರನ್ನು ರಕ್ಷಿಸುವ ಮೂಲಕ ಪ್ರತಿ ವ್ಯಕ್ತಿಗೂ ಪೊಲೀಸ್ ಆಗಬಹುದು: ದಾವಣಗೆರೆ ಎಸ್ಪಿ ಹನುಮಂತರಾಯ

Update: 2019-12-30 22:27 IST

ದಾವಣಗೆರೆ, ಡಿ.30: ಪ್ರತಿಯೊಬ್ಬ ನಾಗರೀಕನೂ ಪೊಲೀಸರ ಕೆಲಸ ನಿರ್ವಹಿಸಬಹುದು. ಜವಾಬ್ದಾರಿ ಮತ್ತು ಶಿಸ್ತಿನಿಂದ ವರ್ತಿಸುವ ಮೂಲಕ, ರಸ್ತೆ ಅಪಘಾತಕ್ಕೀಡಾದವರನ್ನು ರಕ್ಷಿಸುವ ಮೂಲಕ ಹೀಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿ ವ್ಯಕ್ತಿ ಪೊಲೀಸ್ ಆಗಬಹುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು. 

ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಮತ್ತು ರಸ್ತೆ ಸುರಕ್ಷತೆ ಕುರಿತಾಗಿ ಏರ್ಪಡಿಸಲಾಗಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಸ್ತೆ ಅಪಘಾತಕ್ಕೀಡಾದವರನ್ನು ಜನರು ರಕ್ಷಿಸಲು ಹಿಂದೆ ಕಾನೂನು ಕಟ್ಟಲೆಗೆ ಒಳಗಾಗಬೇಕೆಂದು ಹಿಂಜರಿಯುತ್ತಿದ್ದರು. ಆದರೆ ಈಗ ಕಾನೂನು ತಿದ್ದುಪಡಿಯಾಗಿದ್ದು ರಕ್ಷಕರಿಗೆ ಯಾವುದೇ ಕಾನೂನಿನ ಕಟ್ಟಲೆಗಳಿರುವುದಿಲ್ಲ. ಆದ್ದರಿಂದ ಎಲ್ಲರೂ ರಕ್ಷಣೆಗೆ ಮುಂದೆ ಬರಬೇಕೆಂದರು.  

ಜಿಲ್ಲೆಯಲ್ಲಿಯೇ ಒಂದು ವರ್ಷಕ್ಕೆ ಅಂದಾಜು 300 ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸದಿರುವುದು, ನಾಮಕಾವಸ್ಥೆ ಟೋಪಿ ರೀತಿಯ ಹೆಲ್ಮೆಟ್ ಧಾರಣೆ, ಹೆಲ್ಮೆಟ್ ಸ್ಟ್ರಿಪ್ ಹಾಕದಿರುವುದು ಹೆಚ್ಚಾಗಿ ಕಂಡುಬರುತ್ತಿದ್ದು, ಅತ್ಯಮೂಲ್ಯವಾದ ಜೀವ ಕಾಪಾಡುವ ರಕ್ಷಾಕವಚದಂತಿರುವ ಹೆಲ್ಮೆಟ್ ಧರಿಸುವುದಕ್ಕೆ ಯಾಕಿಷ್ಟು ಅಸಡ್ಡೆ ಎಂದು ಆಶ್ಚರ್ಯವಾಗುತ್ತಿದೆ. ವಿದ್ಯಾರ್ಥಿಗಳು ವಾಹನ ಚಾಲನೆ ವೇಳೆ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುವುದು ಸಾಮಾನ್ಯವಾದಂತಾಗಿದೆ. 10 ರಲ್ಲಿ 5 ಯುವಜನತೆ ಮೊಬೈಲ್‍ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುತ್ತಿರುತ್ತಾರೆ. ಇದೊಂದು ಗಂಭೀರವಾದ ತಪ್ಪಾಗಿದ್ದು ಅಪಘಾತಗಳು ಇದರಿಂದ ಹೆಚ್ಚಾಗುತ್ತಿವೆ. ಇವೆಲ್ಲ ಮನುಜ ನಡವಳಿಕೆಗಳು, ಮನೋಭಾವನೆಗಳಿಗೆ ಸಂಬಂಧಿಸಿದ ವಿಷಯಗಳಾಗಿದ್ದು, ಜನತೆ ತಮ್ಮ ನಡವಳಿಕೆಗಳನ್ನು ಧನಾತ್ಮಕವಾಗಿ ಬದಲಾಯಿಸಿಕೊಂಡು ಸಂಚಾರಿ ನಿಯಮಗಳನ್ನು ಪಾಲಿಸುವುದನ್ನು ರೂಢಿಸಿಕೊಳ್ಳಬೇಕು. ಆಗ ತಮ್ಮ ಕುಟುಂಬ ಮತ್ತು ಇತರರೂ ನಿಮ್ಮನ್ನು ಅನುಸರಿಸುತ್ತಾರೆ ಎಂದರು. 

ಮನೆಗಳಿಗೆ ಸಿಸಿ ಟಿವಿ ಅಳವಡಿಸುವುದರಿಂದ ಅನೇಕ ಕ್ರಿಮಿನಲ್ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಕರ್ನಾಟಕ ಸೇಫ್ಟಿ ಆಕ್ಟ್ ಪ್ರಕಾರ ನೂರು ಜನ ಸೇರುವಂತಹ ಹಾಗೂ ಪ್ರತಿದಿನ 500 ಮಂದಿ ಭೇಟಿ ನೀಡುವಂತಹ ಪ್ರದೇಶಗಳಿಗೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಅಳವಡಿಸದಿದ್ದಲ್ಲಿ ದಂಡ ಹಾಕಬಹುದು. ಬಸ್‍ ನಿಲ್ದಾಣ, ರೈಲ್ವೇ ನಿಲ್ದಾಣ, ದೇವಸ್ಥಾನ ಚರ್ಚ್ ಸೇರಿದಂತೆ ಸಾರ್ವಜನಿಕರು ಭೇಟಿ ನೀಡುವ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ ಇದ್ದು ಮನೆಗಳಿಗೂ ಅಳವಡಿಸಿಕೊಂಡಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಅನುಕೂಲ. ಈ ಸುರಕ್ಷತೆ ಬಗ್ಗೆ ತಿಳಿಸುವ ಕಾಯ್ದೆ ಬಗ್ಗೆ ಸಾಕಷ್ಟು ಪ್ರಚಾರ ನೀಡುತ್ತಿದ್ದರೂ ಬಹುತೇಕ ಜನರಿಗೆ ಕರ್ನಾಟಕ ಸುರಕ್ಷತಾ ಕಾಯ್ದೆ ಬಗ್ಗೆ ತಿಳಿದಿಲ್ಲ. ನಮ್ಮ ದೇಶದಲ್ಲಿ ಜನರ ಮತ್ತು ಪೊಲೀಸರ ಅನುಪಾತದಲ್ಲಿ ಬಹಳ ವ್ಯತ್ಯಾಸ ಇದೆ. ದಾವಣಗೆರೆ ನಗರದಲ್ಲೇ 5 ರಿಂದ 6 ಲಕ್ಷ ಜನರಿದ್ದು ಪೊಲೀಸರ ಸಂಖ್ಯೆ 2 ಸಾವಿರ ಇದೆ. ಆದ್ದರಿಂದ ಎಲ್ಲ ವ್ಯಕ್ತಿಗಳೂ ಜವಾಬ್ದಾರಿಯಿಂದ ನಡೆದುಕೊಳ್ಳುವ ಮೂಲಕ ಪೊಲೀಸರಾಗಬಹುದು ಎಂದರು.

ಹೊನ್ನಾಳಿ ಸಿಪಿಐ ದೇವರಾಜ್ ಸೈಬರ್ ಕ್ರೈಂ ಕುರಿತು ಪಿಪಿಟಿ ಪ್ರದರ್ಶಿಸಿ ಮಾತನಾಡಿ, ಮಾದಕ ವ್ಯಸನ ಒಂದು ದೊಡ್ಡ ಪಿಡುಗಾಗಿದ್ದು ಜಗತ್ತಿನಾದ್ಯಂತ 20 ಮಿಲಿಯನ್ ಜನರು ಇದರ ದುಷ್ಪರಿಣಾಮಕ್ಕೆ ಒಳಗಾಗಿದ್ದು ಪ್ರತಿ ವರ್ಷ ಸುಮಾರು 5.7 ಲಕ್ಷ ಜನರು ಈ ವ್ಯಸನದಿಂದ ಮರಣವನ್ನುಪ್ಪುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ ದಿನ 10 ಜನರು ಈ ವ್ಯಸನದ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ. ಇದರ ದುಷ್ಪರಿಣಾಮದ ಕುರಿತು ಎಲ್ಲರಲ್ಲಿ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಪ್ರತಿ ವರ್ಷ ಜೂನ್ 26 ರಂದು ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನವನ್ನಾಗಿ ಆಚರಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಎಂಬಿಎ ಕಾಲೇಜಿನ ಪ್ರಾಂಶುಪಾಲರಾದ ತ್ರಿಭುವನೇಂದ್ರಪ್ಪ, ಟ್ರಾಫಿಕ್ ಪಿಎಸ್‍ಐಗಳಾದ ಮಂಜುನಾಥ ಲಿಂಗಾರೆಡ್ಡಿ, ಜಯಶೀಲ, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News