×
Ad

ಕಾರಣವಿಲ್ಲದೇ ಸಮ್ಮೇಳನ ಅಧ್ಯಕ್ಷರ ಬದಲಾವಣೆಗೆ ಒತ್ತಾಯ ಸರಿಯಲ್ಲ: ಹಿರೇಮಗಳೂರು ಪುಟ್ಟಸ್ವಾಮಿ

Update: 2019-12-30 22:44 IST

ಚಿಕ್ಕಮಗಳೂರು, ಡಿ.30: ಸೂಕ್ತವಾದ ಯಾವುದೇ ಕಾರಣವಿಲ್ಲದೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನು ಬದಲಾಯಿಸುವಂತೆ ಮತ್ತು ಸಮ್ಮೇಳನ ಮುಂದೂಡುವಂತೆ ಒತ್ತಾಯಿಸುತ್ತಿರುವುದು ಸರಿಯಲ್ಲ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.

ನಾಡಿನ ನೆಲ, ಜಲ, ಸಾಹಿತ್ಯ, ಭಾಷೆ ಮತ್ತು ಜನ ಪರವಾಗಿ ಕೆಲಸ ಮಾಡುವವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಅದಕ್ಕೆ ಅನುಗುಣವಾಗಿಯೇ ಕನ್ನಡ ಸಾಹಿತ್ಯ ಪರಿಷತ್‍ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಾಹಿತಿ, ಚಿಂತಕ ಮತ್ತು ಪರಿಸರವಾದಿ ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಆದರೆ, ಯಾವುದೇ ಸೂಕ್ತ ಕಾರಣಗಳನ್ನು ನೀಡದೆ ವಿನಾ ಕಾರಣ ಸಮ್ಮೇಳನ ಅಧ್ಯಕ್ಷರನ್ನು ಬದಲಾಯಿಸುವಂತೆ ಒತ್ತಾಯದ ಕೂಗು ಒಂದು ಕೋಮುವಾದಿ ಮನಸ್ಥಿತಿಯ ಗುಂಒಪುನಿಂದ ಕೇಳಿಬರುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಅವರು ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಬ್ಬರು ಒಪ್ಪಿಕೊಳ್ಳುವ ಸಿದ್ಧಾಂತವನ್ನು ಇನ್ನೊಬ್ಬರು ಒಪ್ಪಿಕೊಳ್ಳಬೇಕು ಎಂದಿಲ್ಲ. ಒಂದು ಸಿದ್ಧಾಂತವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಕಲ್ಕುಳಿ ವಿಠಲ ಹೆಗ್ಡೆ ವಿಚಾರಕ್ಕೆ ಬಂದಾಗ ಸಂವಿಧಾನ ಕೊಟ್ಟಿರುವ ಹಕ್ಕುಗಳಿಗೆ ಅನುಗುಣವಾಗಿಯೇ ಅವರು ಜನಪರವಾಗಿ ಹೋರಾಟಗಳನ್ನು ನಡೆಸಿದ್ದಾರೆ. ಆದರೆ, ದೇಶ ದ್ರೋಹಿ ಎಂಬಂತೆ ಕೆಲವರು ಬಿಂಬಿಸಲು ಹೊರಟಿರುವುದು ತಲೆತಗ್ಗಿಸುವ ವಿಚಾರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯ ಪರಿಷತ್ ಒಂದು ಸಿದ್ಧಾಂತಕ್ಕೆ ಗಂಟು ಬಿದ್ದು ಅಥವಾ ಯಾವುದೇ ರಾಜಕೀಯ ಒತ್ತಡದಿಂದ ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಲ್ಲ. ಅವರು ಸಾಹಿತ್ಯ ಕ್ಷೇತ್ರದಲ್ಲಿ, ಪರಿಸರ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಮತ್ತು ಅವರು ನಡೆಸಿರುವ ಜನಪರವಾದ ಹೋರಾಟವನ್ನು ಗುರುತಿಸಿಯೇ ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅವರು ಸಾಹಿತ್ಯ, ಪರಿಸರ ಮತ್ತು ಜನಪರವಾಗಿ ಬರೆದಿರುವ ನೂರಾರು ಬಿಡಿ ಬರಹಗಳು ರಾಜ್ಯದ ನಾನಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯವಲ್ಲದೆ ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲೂ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲೂ ಉಪನ್ಯಾಸ ನೀಡಿದ್ದಾರೆ ಎಂದು ವಿವರಿಸಿದ್ದಾರೆ.

ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟ ರಕ್ಷಣೆಗಾಗಿ ಹೋರಾಟ ಮಾಡಿದ್ದಾರೆ. ಪರಿಸರಕ್ಕೆ ದೊಡ್ಡ ಅನಾಹುತಕ್ಕೆ ಕಾರಣವಾಗಲಿದ್ದ ಕುದುರೆಮುಖ ಅದಿರು ಕಂಪನಿ ಬಂದ್ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ನದಿಗಳ ರಕ್ಷಣೆಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಮಲೆನಾಡಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಜನರ ಪರವಾಗಿ ಹೋರಾಟವನ್ನು ನಡೆಸಿ ಅವರ ಬದುಕಿಗೆ ನೆರವಾಗಿದ್ದಾರೆ. ಇವೆಲ್ಲವು ನಾಡಿನ ರಕ್ಷಣೆಗಾಗಿ ನಡೆಸಿರುವ ಹೋರಾಟವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಅವರ ಮಂಗನ ಬ್ಯಾಟೆ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ಪಡೆದುಕೊಂಡಿದೆ. ಪರಿಸರ ರಕ್ಷಣೆಗಾಗಿ ಜನ ಜಾಗೃತಿಗಾಗಿ ಕಿರುಹೊತ್ತಿಗೆಗಳನ್ನು ಮುದ್ರಿಸಿ ಹಂಚಿದ್ದಾರೆ. ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಪಡೆದುಕೊಂಡಿರುವ ಕಲ್ಕುಳಿ ವಿಠಲ ಹೆಗ್ಡೆ ನಮ್ಮ ಜಿಲ್ಲೆಯ ಹೆಮ್ಮೆಯ ಸಾಹಿತಿ ಎಂದು ಗರ್ವದಿಂದ ಹೇಳಿಕೊಳ್ಳಬಹುದಾಗಿದೆ. ಆದರೆ, ಯಾವುದೇ ಸೂಕ್ತ ಕಾರಣಗಳಿಲ್ಲದೆ ವಿರೋಧ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು, ತಾಯಿ ಶಾರದಾಂಬೆಯ ಮಡಿಲು ಶೃಂಗೇರಿಯಲ್ಲಿ ನಡೆಯುತ್ತಿರುವ ಸಮ್ಮೇಳನ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕಾಗಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News