ಅಪಘಾತದಿಂದ ಪ್ರತಿ ವರ್ಷ ದೇಶದಲ್ಲಿ 1.25 ಲಕ್ಷ ಮಂದಿಯ ಸಾವು-ನೋವು

Update: 2019-12-30 18:24 GMT

ಮಂಡ್ಯ, ಡಿ.30: ಪ್ರತಿವರ್ಷ ದೇಶದಲ್ಲಿ ಅಪಘಾತದಿಂದ ಸುಮಾರು 1.25 ಲಕ್ಷ ಜನರು ಅಪಘಾತದಲ್ಲಿ ಸಾವು-ನೋವುಗಳನ್ನು ಅನುಭವಿಸುತ್ತಿದ್ದು, 10 ರಿಂದ 12 ಲಕ್ಷ ಮಂದಿ ಶಾಶ್ವತ ಅಂಗವೈಕಲ್ಯರಾಗುತ್ತಿದ್ದಾರೆ ಎಂದು ಎಸ್ಪಿ ಕೆ.ಪರಶುರಾಂ ಹೇಳಿದ್ದಾರೆ.

ರೋಟರಿ ಸಂಸ್ಥೆ ಬೆಂಗಳೂರು ದಕ್ಷಿಣ, ಮಂಡ್ಯ ಷುಗರ್‍ಸಿಟಿ ಹಾಗೂ ಸೆಂಟೇನಿಯಲ್ ಲಯನ್ಸ್ ಸಂಸ್ಥೆ, ಬೆಂಗಳೂರಿನ ಇನ್ಸ್‍ಸ್ಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮತ್ತು ವರ್ಧಮಾನ್ ನೇತ್ರಾಲಯ ಇವರ ಸಹಯೋಗದೊಂದಿಗೆ ತಾಲೂಕಿನ ಬೇಲೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ಪರಿಕರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮಂಡ್ಯ ಜಿಲ್ಲೆಯಲ್ಲೂ ವರ್ಷಕ್ಕೆ 450 ಮಂದಿ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದು, 2 ರಿಂದ 3 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕುಟುಂಬದ ದುಡಿಯುವವರೇ ಇಲ್ಲದಂತಾಗುತ್ತಾರೆ. ಈ ಬಗ್ಗೆ ಜಾಗೃತಿ ಅಗತ್ಯ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಹೆದ್ದಾರಿಗಳು ಹೆಚ್ಚು ಇರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು 108 ಅ್ಯಂಬ್ಯುಲೆನ್ಸ್‍ನ್ನೇ ಕಾಯಬೇಕಾಗುತ್ತದೆ. ಆದ್ದರಿಂದ ರೋಟರಿ, ಲಯನ್ಸ್ ಸಂಸ್ಥೆಗಳು ಪೊಲೀಸ್ ಇಲಾಖೆಗೆ 2 ರಿಂದ 3 ಆ್ಯಂಬ್ಯುಲೆನ್ಸ್ ವಾಹನಗಳನ್ನು ಕೊಡಿಸುವಂತೆ ಮನವಿ ಅವರು ಮಾಡಿದರು. 

ಲಯನ್ಸ್ ಮೊದಲನೇ ಜಿಲ್ಲಾ ಉಪ ರಾಜ್ಯಪಾಲ ಜಿ.ಎ. ರಮೇಶ್ ಮಾತನಾಡಿ, 103 ವರ್ಷಕ್ಕೆ ಲಯನ್ಸ್ ಸಂಸ್ಥೆ ಕಾಲಿಟ್ಟಿದೆ. ರೋಟರಿ ಮತ್ತು ಲಯನ್ಸ್ ಎರಡೂ ಧ್ಯೇಯ ಸೇವೆ ಮಾಡುವುದೇ ಆಗಿದೆ. ಸೂನಗಹಳ್ಳಿ ಮತ್ತು ಬೇಲೂರು ಎರಡೂ ಶಾಲೆಯ 1,400 ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡುತ್ತಿದ್ದೇವೆ ಎಂದರು. 

ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್, ರೋಟರಿ ಸಂಸ್ಥೆಯ ರಾಜೇಶ್ವರಿ ಸುನಿಲ್, ಮಂಡ್ಯ ಷುಗರ್ ಸಿಟಿ ಲಯನ್ಸ್ ಸಂಸ್ಥೆಯ ರಾಧಾ ಪುರುಷೋತ್ತಮ್, ಮಂಡ್ಯ ಸೇಟೇನಿಯಲ್ ಲಯನ್ಸ್ ಸಂಸ್ಥೆಯ ಜಯರಾಮೇಗೌಡ, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News