ಮಿಸ್ಟರ್ ಮೋದಿ ಬೊಗಳೆ ದಾಸಯ್ಯ: ವಿ.ಎಸ್.ಉಗ್ರಪ್ಪ ವಾಗ್ದಾಳಿ

Update: 2019-12-31 12:13 GMT

ಬೆಂಗಳೂರು, ಡಿ.31: ತುಮಕೂರು ನಗರಕ್ಕೆ ಸ್ಮಾರ್ಟ್‌ಸಿಟಿ, ಫುಡ್ ಪಾರ್ಕ್, ನದಿ ಜೋಡಣೆ ಮತ್ತು ಇಸ್ರೋ ಕೇಂದ್ರದ ಭರವಸೆ ನೀಡಿದ್ದ ಪ್ರಧಾನಿ ಮೋದಿ, ಯಾವುದನ್ನೂ ಈಡೇರಿಸಿಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಇದೀಗ ನೂತನ ವರ್ಷದ ಆರಂಭದಲ್ಲೆ ಮೋದಿ ತುಮಕೂರು ನಗರಕ್ಕೆ ಆಗಮಿಸುತ್ತಿದ್ದಾರೆ. ಮಿಸ್ಟರ್ ಮೋದಿ ಒಂದು ರೀತಿಯಲ್ಲಿ ಬೊಗಳೆ ದಾಸಯ್ಯನಂತೆ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜನರಿಗೆ ಸುಳ್ಳು ಹೇಳಿವುದಕ್ಕೂ ಒಂದು ಇತಿಮಿತಿ ಇದೆ. ಒಂದು ಅಥವಾ ಎರಡು ಬಾರಿ ಸುಳ್ಳು ಹೇಳಬಹುದು. ಆದರೆ, ಇದೀಗ ನಾಲ್ಕನೆ ಬಾರಿ ಮೋದಿ ತುಮಕೂರು ನಗರಕ್ಕೆ ಆಗಮಿಸುತ್ತಿದ್ದು, ಅವರು ನೀಡಿದ ಒಂದು ಆಶ್ವಾಸನೆಯನ್ನೂ ಈಡೇರಿಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ದ್ವಂದ್ವ ನೀತಿ ಕೈಬಿಡಿ: ಅಗ್ಗದ ದರದಲ್ಲಿ ಮದ್ಯ ಪೂರೈಕೆ ಮಾಡುವ ಸರಕಾರದ ಚಿಂತನೆಯನ್ನು ಗಮನಿಸಿದರೆ ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದು ನಿಶ್ಚಿತ. ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಪೊಲೀಸರು ದಂಡ ಹಾಕುತ್ತಾರೆ. ಮತ್ತೊಂದು ಕಡೆ ಅಗ್ಗದ ದರದಲ್ಲಿ ಮದ್ಯ ವಿತರಣೆಗೆ ಹೊರಟಿದ್ದಾರೆಂದು ದೂರಿದರು.

ರಾಜ್ಯ ಸರಕಾರ ತನ್ನ ದ್ವಂದ್ವ ನೀತಿಯಲ್ಲಿ ಕೈಬಿಟ್ಟು, ಮೊದಲು ರಾಜ್ಯದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಿ. ಸಂಸ್ಕೃತಿ ವಕ್ತಾರರಂತೆ ಮಾತನಾಡುವ ಆರೆಸೆಸ್ಸ್ ಮುಖಂಡರು ಸರಕಾರದ ಲಿಕ್ಕರ್ ಸಂಸ್ಕೃತಿ ಕೈಬಿಡಲು ಸಲಹೆ ನೀಡಬೇಕು ಎಂದು ಉಗ್ರಪ್ಪ ಕಿಡಿಕಾರಿದರು.

ಬಿಜೆಪಿಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಬಿಜೆಪಿ ಮುಖಂಡರು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ವಿವಾದಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಕರ್ನಾಟಕ ರಾಜ್ಯದ ಯಾವುದೇ ಭಾಗವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವ ಪ್ರಶ್ನೆಯೆ ಇಲ್ಲ. ನಾಡು-ನುಡಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಎಂದೂ ರಾಜಕೀಯ ಮಾಡುವುದಿಲ್ಲ. ಸೂಕ್ಷ್ಮ ವಿಚಾರದ ಬಗ್ಗೆ ಬಿಎಸ್‌ವೈ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News