ಡಿಸಿಎಂ ಕಾರಜೋಳ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

Update: 2019-12-31 12:16 GMT

ಕಲಬುರಗಿ, ಡಿ.31: ಇಲ್ಲಿನ ಚಿತ್ತಾಪುರ ತಾಲೂಕಿನ ವಾಟಿ ಪಟ್ಟಣದಲ್ಲಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಸರಕಾರದಿಂದ ಮೂರು ವಸತಿ ಶಾಲೆಗಳು ಮಂಜೂರಾಗಿದ್ದರೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರ ನಿರ್ಲಕ್ಷದಿಂದಾಗಿ ಕಾಮಗಾರಿ ಆರಂಭವಾಗಿಲ್ಲವೆಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. 

ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ವಸತಿ ಶಾಲೆಗಳ ಕಾಮಗಾರಿ ಮಂಜೂರಾಗಿತ್ತು. ಇದಕ್ಕೆ ಚಾಲನೆ ನೀಡಲು ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಸಮಯವನ್ನು ಮುಂದೂಡುತ್ತಾ ಬರುತ್ತಿದ್ದಾರೆ. ಈ ಬಗ್ಗೆ ಅವರಿಗೆ ಮನವಿ ಮಾಡಿದಾಗ್ಯು ಉದಾಸೀನ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.

ಈ ಬಗ್ಗೆ ಡಿಸಿಎಂ ಗೋವಿಂದ ಕಾರಜೋಳಗೆ ಪತ್ರ ಬರೆದಿರುವ ಅವರು, ವಸತಿ ಶಾಲೆಗಳ ಕಾಮಗಾರಿಗೆ ಅಡಿಗಲ್ಲು ಸಮಾರಂಭಕ್ಕೆ ಡಿಸಿಎಂ ಬರುತ್ತೇನೆಂದು ತಿಳಿಸಿದ್ದರು. ಹೀಗಾಗಿ ದಿನಾಂಕವನ್ನು ಮುಂದೂಡಲಾಗಿತ್ತು. ನಂತರದ ದಿನಗಳಲ್ಲಿ ಜಿಲ್ಲಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ನಾನೂ ವೈಯಕ್ತಿಕವಾಗಿ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಆದರೂ ಅವರು ಅಡಿಗಲ್ಲಿಗೆ ದಿನಾಂಕವನ್ನು ನಿಗದಿ ಪಡಿಸಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಿಗದಿತ ವೇಳೆಯಲ್ಲಿ ಕಾಮಗಾರಿ ಮುಗಿಯದೇ ಇದ್ದರೆ ಇದಕ್ಕೆ ಮೀಸಲಾಗಿದ್ದ ಎಸ್ಸಿಪಿ-ಟಿಎಸ್ಪಿಯ ಅನುದಾನ ಬೇರೆ ಕಡೆಗೆ ವರ್ಗಾವಣೆಯಾಗುತ್ತದೆ. ಜಿಲ್ಲಾ ಉಸ್ತುವಾರಿ ಗೋವಿಂದ ಕಾರಜೋಳರೇ ಆಗಿರುವುದರಿಂದ ಕಾರ್ಯಕ್ರಮಕ್ಕೆ ಬರಬೇಕಿರುವುದು ಶಿಷ್ಟಾಚಾರವಾಗಿದೆ. ಹೀಗಾಗಿ ಕಾಮಗಾರಿಯ ಅಡಿಗಲ್ಲು ಸಮಾರಂಭಕ್ಕೆ ದಿನಾಂಕ ನಿಗದಿ ಪಡಿಸಬೇಕೆಂದು ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News