ಪೇಜಾವರ ಶ್ರೀ ನಿಧನದ ಬಗ್ಗೆ ಆದೇಶ ಪತ್ರ: ಸ್ಪಷ್ಟನೆ ನೀಡಿದ ಪೊಲೀಸರು

Update: 2019-12-31 13:00 GMT

ಬೆಂಗಳೂರು, ಡಿ.31: ಪೊಲೀಸ್ ಸಿಬ್ಬಂದಿಯ ಸಣ್ಣ ತಪ್ಪಿನಿಂದ ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಿಧನ ಕುರಿತು ಗೊಂದಲ ಉಂಟಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಡಿ.29ರಂದು ರವಿವಾರ ಪೇಜಾವರ ಶ್ರೀ ಅವರು ನಿಧನ ಹೊಂದಿದ್ದರು. ಆದರೆ, ಪೊಲೀಸ್ ನಿಯೋಜನೆ ಸಂಬಂಧ ಅವಸರದಲ್ಲಿ ತಪ್ಪಾಗಿ ಡಿಸೆಂಬರ್ 26ರ ದಿನಾಂಕ ನಮೂದಿಸಲಾಗಿದೆ. ಇದಕ್ಕೆ ಸ್ಥಳೀಯ ಪೊಲೀಸ್ ಸಿಬ್ಬಂದಿ ಕಾರಣಕರ್ತರು ಎಂದು ಸುಬ್ರಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಚ್.ಮಂಜುನಾಥ್ ಬಾಬು 'ವಾರ್ತಾಭಾರತಿ' ಪತ್ರಿಕೆಗೆ ತಿಳಿಸಿದರು.

ಪೊಲೀಸರನ್ನು ನಿಯೋಜನೆ ಮಾಡಿದ್ದ ಆದೇಶ ಪ್ರತಿಯಲ್ಲಿ ದಿನಾಂಕ ತಪ್ಪಾಗಿದ್ದ ಕಾರಣ ಅದರಲ್ಲಿ ಸಹಿ ಸಹ ಮಾಡಿರಲಿಲ್ಲ. ಆದರೆ, ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದ್ದು, ತಪ್ಪಾಗಿರುವ ಪ್ರತಿಯನ್ನು ಯಾರು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಅವರು ಹೇಳಿದರು. ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಕುರಿತು ಪೊಲೀಸ್ ಇಲಾಖೆಯ ಪ್ರತಿಯನ್ನಿಟ್ಟುಕೊಂಡು ಗೊಂದಲ ಸೃಷ್ಟಿಸುವ ಕೆಲಸ ಬೇಡ ಎಂದು ಮಂಜುನಾಥ್ ಮನವಿ ಮಾಡಿದರು.

ಪ್ರತಿಯ ಹಿನ್ನೆಲೆ: ಪೇಜಾವರ ಸ್ವಾಮೀಜಿಗಳು ದೈವಾಧೀನರಾಗಿವರಿಂದ ಅಂತ್ಯ ಸಂಸ್ಕಾರವನ್ನು ಸಿ.ಕೆ.ಅಚ್ಚಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಬನಶಂಕರಿ 3ನೇ ಹಂತ, ಕತ್ರಿಕುಪ್ಪೆ ಮುಖ್ಯ ರಸ್ತೆಯಲ್ಲಿರುವ ಪೂರ್ಣಪ್ರಜ್ಞಾ ವಿದ್ಯಾಪೀಠ ಆವರಣದಲ್ಲಿ ನೆರವೇರಿಸುವುದರಿಂದ ಈ ಸ್ಥಳಕ್ಕೆ ನೂರಾರು ಸ್ವಾಮೀಜಿಗಳು, ಗಣ್ಯವ್ಯಕ್ತಿಗಳು ಹಾಗೂ ಲಕ್ಷಾಂತರ ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಬಂದೋಬಸ್ತ್‌ಗಾಗಿ ಕೆ.ಎಸ್.ಲೇಔಟ್ ಪಿಎಸ್ಐ ಎಚ್.ಎಂ.ನಾಗೇಶ್ ಸೇರಿದಂತೆ ನಾಲ್ವರು ಪೊಲೀಸ್ ಪೇದೆಗಳನ್ನು ನಿಯೋಜಿಸಿ, ಡಿ.26ರ ದಿನಾಂಕದ ಪೊಲೀಸ್ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News