ನನ್ನದು ಆತ್ಮಾಹುತಿ ಬಾಂಬರ್ ಸ್ಥಿತಿ: ಬಿಜೆಪಿ ಶಾಸಕ ಯತ್ನಾಳ್

Update: 2019-12-31 14:03 GMT

ವಿಜಯಪುರ, ಡಿ. 31: ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ವಿವಾದಕ್ಕೆ ಸಿಲುಕುತ್ತಿದ್ದ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ‘ನನ್ನ ಸ್ಥಿತಿ ಸೂಸೈಡ್ ಬಾಂಬರ್ ರೀತಿ ಆಗಿದೆ’ ಎಂದು ಪಕ್ಷದ ಮುಖಂಡರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ. 2024-25ರಲ್ಲಿ ರಾಜ್ಯದ ಮುಖ್ಯಮಂತ್ರಿ ಆಗುವ ಕನಸನ್ನು ಇಟ್ಟುಕೊಂಡಿದ್ದೇನೆ ಎಂದು ತನ್ನ ಮನದಾಳದ ಇಂಗಿತವನ್ನು ಬಹಿರಂಗಪಡಿಸಿದರು.

ಹಿರಿಯ ಶಾಸಕ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ನಿಶ್ಚಿತ. ಆದರೆ, ಅವರು ಮುಖ್ಯಮಂತ್ರಿ ಸುತ್ತ ಗಿರಕಿ ಹೊಡೆಯುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಅಥಣಿ ಮತ್ತು ಕಾಗವಾಡ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಸಚಿವರಾಗಿ ಎಂದು ನಾನು ಹೇಳಿದ್ದೆ ಎಂದರು.

ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಕಾರಣಕ್ಕೂ ಲಾಬಿ ಮಾಡುವುದಿಲ್ಲ. ಸವದಿ ಹಣೆಬರಹ ಚೆನ್ನಾಗಿತ್ತು. ಹೀಗಾಗಿ ಅವರು ಸೋತರೂ ಉಪಮುಖ್ಯಮಂತ್ರಿ ಆಗಿದ್ದಾರೆ ಎಂದ ಅವರು, ನನ್ನ ಹಣೆಬರಹವೂ ಚೆನ್ನಾಗಿದ್ದರೆ 2024ಕ್ಕೆ ಮುಖ್ಯಮಂತ್ರಿ ಆಗುವೆ ಎಂದು ಹೇಳಿದರು.

ಲಾಗ ಹೊಡೆಯಬೇಕು: ಬೆಳಗಾವಿ ಜನಪ್ರತಿನಿಧಿಗಳು ಮರಾಠಿಗಳನ್ನು ಪ್ರೀತಿ ಮಾಡದಿದ್ದರೆ ಅವರೆಲ್ಲ ಚುನಾವಣೆಯಲ್ಲಿ ಲಾಗ ಹೊಡೆಯಬೇಕಾಗುತ್ತದೆ ಎಂದ ಅವರು, ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

ಉಪಮುಖ್ಯಮಂತ್ರಿ, ಸಂಪುಟ ವಿಸ್ತರಣೆ ಸಂಬಂಧ ಬಹಿರಂಗ ಹೇಳಿಕೆ ನೀಡದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ನನಗೆ ನೋಟಿಸ್ ನೀಡಿಲ್ಲ. ಬದಲಿಗೆ ವಾಟ್ಸಪ್ ಸಂದೇಶ ರವಾನಿಸಿದ್ದಾರೆ. ಆದರೆ, ನಾನು ನನ್ನ ಹೇಳಿಕೆಯನ್ನು ಹಿಂಪಡೆದಿಲ್ಲ. ವಿಷಾದವನ್ನೂ ವ್ಯಕ್ತಪಡಿಸಿಲ್ಲ. ನನ್ನ ಹೇಳಿಕೆಗೆ ಈಗಲೂ ಬದ್ಧ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News